ಭೂಸ್ವಾಧೀನ ಕೈಬಿಡಿ: ಮನವಿ
ಹಾವೇರಿ: ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣಕ್ಕಾಗಿ ತಾಲೂಕಿನ ಕನಕಾಪುರ, ಕಳ್ಳಿಹಾಳ, ತೋಟದ ಯಲ್ಲಾಪುರ, ಭೂ-ಕೋಡಿಹಳ್ಳಿ, ನೆಲೂಗಲ್ಲ ಗ್ರಾಮಗಳಲ್ಲಿ ಉದ್ದೇಶಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿ ನೂರಾರು ರೈತರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಈ 5 ಗ್ರಾಮಗಳ ರೈತರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ತಮ್ಮ ಭೂಮಿ ಕಳೆದುಕೊಂಡಿದ್ದು, ಉಳಿದ ಕ್ಷೇತ್ರದಲ್ಲಿ ಉಪಜೀವನ ಸಾಗಿಸುತ್ತಿದ್ದಾರೆ. ಮತ್ತೆ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ನೀರಾವರಿ ನಿಗಮ ಅಧಿಸೂಚನೆ ಹೊರಡಿಸಿದೆ. ಅದರಿಂದ ಇದ್ದ ಅಲ್ಪ ಜಮೀನೂ ಕೈ ಬಿಟ್ಟು ಹೋಗಲಿದೆ. ಜಮೀನುಗಳಲ್ಲಿ ಕೊಳವೆಬಾವಿ ಕೊರೆಯಿಸಿ ಉತ್ತಮ ಫಸಲು ತೆಗೆಯುತ್ತಿದ್ದೇವೆ. ತೋಟಗಾರಿಕೆ ಸಸಿಗಳನ್ನು ನೆಟ್ಟಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಬೆಳೆಗಳ ಸಾಗಿಸಲು ಅನುಕೂಲವಿದೆ. ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ನೀಡಿದರೆ ಜಮೀನಿಗೆ ಸದ್ಯದ ಮಾರುಕಟ್ಟೆ ಬೆಲೆ ಲಭಿಸಲ್ಲ. ಪ್ರಸ್ತಾವಿತ ಯೋಜನೆ ಜಲ ಸಂಗ್ರಹಣೆ ಸ್ಥಳದಿಂದ 250 ಕಿಮೀ ದೂರದಲ್ಲಿದೆ. ಇದರಿಂದ ನಮ್ಮ ಜಮೀನುಗಳಿಗೆ ನೀರು ಕಾಲುವೆ ಮೂಲಕ ಹರಿದು ಬರುವುದು ಸಾಧ್ಯವಿಲ್ಲ. ಹೆದ್ದಾರಿಗೆ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ. ಇದರ ಹೋರಾಟ ಇನ್ನೂ ಕೋರ್ಟಿನಲ್ಲಿದೆ. ಜಮೀನು ಕಳೆದುಕೊಂಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಜಮೀನುಗಳನ್ನು ನೆಚ್ಚಿಕೊಂಡಿರುವ ರೈತರಿಗೆ ಕೃಷಿ ಹೊರತುಪಡಿಸಿದಂತೆ ಬೇರೆ ಉದ್ಯೋಗಗಳೇ ಗೊತ್ತಿಲ್ಲ. ಈ ತುಂಡು ಜಮೀನುಗಳನ್ನೂ ಕಳೆದುಕೊಂಡಲ್ಲಿ ಇನ್ನು ಬದುಕುವುದೆಂತು ಎಂದರು.
ಉದ್ದೇಶಿತ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಹನುಮಂತಪ್ಪ ಮದನಗಟ್ಟಿ, ರಾಘವೇಂದ್ರ ಸಾನು, ಶಿವಣ್ಣ ಮಾಸೂರ, ಮಾಲತೇಶ ತಳವಾರ, ಬಸವಣ್ಣೆಪ್ಪ ತಳವಾರ, ದೊಡ್ಡಫಕ್ಕೀರಗೌಡ ಗಾಜಿಗೌಡ್ರ, ಶಿವಶಂಕ್ರಯ್ಯ ವರ್ಧಿಮಠ, ನಾಗೇಂದ್ರ ಮಾಳಿ ಸೇರಿದಂತೆ 50ಕ್ಕೂ ಹೆಚ್ಚು ರೈತರು ಆಗ್ರಹಿಸಿದ್ದಾರೆ.