ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾನ ಹೆಚ್ಚಳಕ್ಕೆ ಶ್ರಮಿಸಿ

Vishwanath S
Updated On : 3 Apr 2013, 10:45 am

ಹಾವೇರಿ: ಇವತ್ತಿಗೂ ಅನೇಕ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕುಸಿಯುತ್ತಿದ್ದು, ಇಂತಹ ಪ್ರದೇಶಗಳಲ್ಲಿನ ಮತದಾನ ಪ್ರಮಾಣ ಅಧಿಕವಾಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮೇಶ ಕುಸಗಲ್ಲ ನುಡಿದರು.
ಮಂಗಳವಾರ ನಗರದ 3ನೇ ನಂಬರ ಶಾಲೆಯಲ್ಲಿ ಜಿಪಂ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಹಾಗೂ ವಾರ್ತಾ ಇಲಾಖೆ ಆಶ್ರಯದಲ್ಲಿ ಜನಸಾಮಾನ್ಯರಿಗೆ ಮತದಾನ ಮಹತ್ವ, ಕಡ್ಡಾಯ ಮತದಾನದಿಂದ ಪ್ರಜಾಪ್ರಭುತ್ವಕ್ಕೆ ಸಹಾಯಕವಾಗುವ ಅಂಶಗಳ ಕುರಿತು ಮತದಾರರ ಬೃಹತ್ ಜಾಥಾ ಹಾಗೂ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಶೇ. 65 ಮತದಾನವಾಗುತ್ತಿದ್ದು, ಮತದಾನ ಪ್ರಮಾಣ ಶೇ. 80-85ರಷ್ಟು ಹೆಚ್ಚಿಸುವತ್ತ ಗಮನಹರಿಸಬೇಕಿದೆ. ಮತದಾನ ನಮ್ಮ ಹಕ್ಕು, ಅದನ್ನು ಅರ್ಹ ವ್ಯಕ್ತಿಗೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಸಾರ್ವಜನಿಕರ ಮೇಲಿದೆ. ಸುಶಿಕ್ಷಿತರು ವಾಸಿಸುವ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ನಗರ ಪ್ರದೇಶದ ಪ್ರಜ್ಞಾವಂತ ಮತದಾರರು ಮತದಾನಕ್ಕೆ ಮುಂದಾಗಿ ಅರ್ಹರರನ್ನು ಚುನಾಯಿಸುವಂತೆ ಸಲಹೆ ನೀಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಕುರಿತು ಅರಿವು ಮೂಡಿಸುವುದು, ವಿದ್ಯಾರ್ಥಿಗಳ ಕೈಯಲ್ಲಿ ಮತದಾನದ ಚೀಟಿಯನ್ನು ಕಳಿಸಿ, ಅದನ್ನು ತಮ್ಮ ಪಾಲಕರಿಗೆ ತಿಳಿಸಿ ಹೇಳುವುದರೊಂದಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವರಿಕೆ ಮಾಡುವಂತೆ ಉತ್ತೇಜನ ನೀಡುವಂತೆ ಶಿಕ್ಷಕರಿಗೆ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಏ. 7 ಕೊನೆ ದಿನವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ತಕ್ಷಣ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸಮೀಕ್ಷೆ ಮಾಡಬೇಕು. ಚುನಾವಣೆಗೆ ನಿಯೋಜನೆ ಆಗಿರುವವರು ಕಡ್ಡಾಯವಾಗಿ ಮತದಾನ ಮಾಡುವುದಕ್ಕಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ಸಿ.ಪಿ. ಮಾಯಾಚಾರಿ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಕೇವಲ 5 ದಿನಗಳು ಬಾಕಿ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಎಸ್.ಬಿ. ಕೊಡ್ಲಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳಿಹೊಸೂರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಶೆಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಿ.ಎಚ್. ಲಲಿತಾ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement