ರಂಗಭೂಮಿ ಪ್ರೋತ್ಸಾಹಿಸಿ ಬೆಳೆಸಿ
ಹಾನಗಲ್ಲ: ಸಮಾಜವನ್ನು ವಿಶ್ಲೇಷಿಸುವ ಸಮರ್ಥ ವಾಹಕ ಶಕ್ತಿಯಾಗಿರುವ ರಂಗಭೂಮಿಯನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಸಾರ್ವಜನಿಕರದಾಗಿದೆ ಎಂದು ನಾಟಕ ಅಕಾಡೆಮಿ ಸುವರ್ಣ ರಂಗಭೂಮಿ ಪ್ರಶಸ್ತಿ ಪುರಸ್ಕೃತ ಕಲಾವಿದ, ಸಾಹಿತಿ ಸತೀಶ ಕುಲಕರ್ಣಿ ಕರೆ ನೀಡಿದರು.
ಮಂಗಳವಾರ ಹಾನಗಲ್ಲ ತಾಲೂಕಿನ ತಿಳವಳ್ಳಿಯಲ್ಲಿ ಚಿತ್ತರಗಿ ವಿಜಯ ಮಹಾಂತೇಶ ನಾಟ್ಯ ಸಂಘದ ಆವರಣದಲ್ಲಿ ನಡೆದ ವೃತ್ತಿ ರಂಗಭೂಮಿ ಒಂದು ಪಕ್ಷಿನೋಟ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೃತ್ತಿ ರಂಗಭೂಮಿ ಕಲಾವಿದರು ದಾಖಲೀಕರಣಕ್ಕೆ ಗಮನಹರಿಸಬೇಕು. ವಿವಿಧೆಡೆ ಕಲೆ ಪ್ರದರ್ಶನಕ್ಕೆ ಅನುದಾನವಿಲ್ಲದೆ ತೆರಳುವ ಕಲಾವಿದರಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ. ರಂಗಭೂಮಿ ಕಲಾವಿದರಿಗೆ ನೀಡುವ ಮಾಶಾಸನದ ವಯೋವಾನವನ್ನು 50 ವರ್ಷಕ್ಕೆ ಸೀಮಿತಗೊಳಿಸಬೇಕು ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಸಾಹಿತಿ ಮಾರುತಿ ಶಿಡ್ಲಾಪುರ ಮಾತನಾಡಿ, ವೃತ್ತಿ ರಂಗಭೂಮಿ ಈಗ ಹಣ ಮಾಡಿಕೊಳ್ಳುವ ಉದ್ಯಮವಾಗಿ ಉಳಿದಿಲ್ಲ. ರಂಗಭೂಮಿ ಜೀವಂತ ಅಭಿವ್ಯಕ್ತಿ. ನೋವು ನೇಯುವ, ಕಟು ಸತ್ಯಗಳನ್ನು ಪ್ರತಿಬಿಂಬಿಸುವ ರಂಗಭೂಮಿಯಲ್ಲಿ ಭ್ರಷ್ಟತೆ ಇಣುಕಬಾರದು. ರಂಗಭೂಮಿಯನ್ನು ಅಂತರಂಗ ಶುದ್ಧತೆಯಿಂದ ನೋಡುವ ಅಗತ್ಯವಿದೆ. ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿದ್ದ ರಂಗಭೂಮಿ ಈಗ ಸ್ವಲ್ಪ ದೂರ ಸರಿಯುತ್ತಿರುವುದು ವಿಷಾದದ ಸಂಗತಿ. ನೋವು ಮುಚ್ಚಿಕೊಂಡು ನಗೆಯ ಬದುಕು ಕೊಟ್ಟವರು ಕಲಾವಿದರು ಎಂದರು.
ರಂಗ ಕಲಾವಿದ ಉದಯ ನಾಸಿಕ ಮಾತನಾಡಿ, ವೃತ್ತಿ ರಂಗಭೂಮಿಯಲ್ಲಿ ಉತ್ತರ ಕರ್ನಾಟಕದ ಕಲಾವಿದರನ್ನು ಕಡೆಗಣಿಸಲಾಗಿದೆ. ವೃತ್ತಿ ರಂಗಭೂಮಿ ಕಲಾವಿದರಿಗೆ ಆಡಳಿತಾತ್ಮಕ ಬದ್ಧತೆ ಬೇಕು. ರಂಗಭೂಮಿ ಕಲಾವಿದರಿಗೆ ಭದ್ರತೆ ಬೇಕು ಎಂದರು. ಶೇಷಗಿರಿ ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ರಮೇಶ ಉಪ್ಪಾರ, ಚಿತ್ತರಗಿ ವಿಜಯ ಮಹಾಂತೇಶ ನಾಟ್ಯ ಸಂಘದ ಮುಖ್ಯಸ್ಥ ವಿರಯ್ಯಸ್ವಾಮಿ ಹಿರೇಮಠ, ಕಲಾವಿದರಾದ ಆಂಜನಪ್ಪ, ಯಮುನಪ್ಪ, ನಂದಾ ಹೊಸಮನಿ, ರಾಜೇಶ್ವರಿ ಕುಮಾರ ಅನುಭವ ಹಂಚಿಕೊಂಡರು.