ಗ್ರಾಮೀಣರಿಗೆ ಸಹಕರಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಿ
ಹಾನಗಲ್ಲ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಸಹಕಾರ ನೀಡುವುದರೊಂದಿಗೆ ಬ್ಯಾಂಕಿನ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದು ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷ, ಉದ್ಯಮಿ ಚನ್ನಬಸಪ್ಪ ಬೆಲ್ಲದ ಹೇಳಿದರು.
ಅಕ್ಕಿಆಲೂರಿನ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ನಡೆದ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದಿನ ಅವಧಿಯಲ್ಲಿ ಬ್ಯಾಂಕು ಸಂಪೂರ್ಣ ರೈತರ ಬೆಳೆ ಸಾಲ ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನತೆಗೆ ಆರ್ಥಿಕ ಸಹಾಯ ಒದಗಿಸಿತ್ತು. ಅದರೊಂದಿಗೆ ಹಲವು ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸಿ, ಸಾಲ ವಸೂಲಾತಿಯಲ್ಲಿ ಹೊಸ ದಾಖಲೆ ಮಾಡಿತ್ತು. ಅಲ್ಲದೇ ಇ-ಸ್ಟಾಂಪಿಂಗ್ ಯೋಜನೆ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದೆ. ಬರುವ ದಿನಗಳಲ್ಲಿ ಬ್ಯಾಂಕಿನ ವ್ಯವಹಾರ ಸುಗಮವಾಗಿ ನಡೆದು ಉತ್ತಮ ಪ್ರಗತಿ ಸಾಗುವಂತೆ ಕಾಳಜಿ ವಹಿಸುವ ಅಗತ್ಯವಿದೆ ಎಂದು ಸಲಹೆ ಮಾಡಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಪಾವಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ವಿವಿಧ ಸಹಕಾರಿ ಸಂಘಗಳು, ಸ್ತ್ರೀ-ಶಕ್ತಿ ಸಂಘಗಳು ಬ್ಯಾಂಕುಗಳಿಗೆ ವಹಿವಾಟಿನಲ್ಲಿ ಸವಾಲಾಗಿ ಎದ್ದು ನಿಂತಿವೆ. ಗ್ರಾಹಕರು ಬ್ಯಾಂಕಿನ ಜೊತೆಗೆ ನಿಕಟ ಸಂಪರ್ಕ ಹೊಂದಬೇಕಾಗಿದೆ ಎಂದ ಅವರು, ಬ್ಯಾಂಕಿನ ಆರ್ಥಿಕ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.
ಹೊಸ ಯೋಜನೆಗಳನ್ನು ರೂಪಿಸಿ ಜನತೆ ಜೊತೆಗೆ ಅವಿನಾಭಾವ ಸಂಪರ್ಕ ಹೊಂದಿ ಬ್ಯಾಂಕಿನ ವ್ಯವಹಾರಗಳು ಸುಲಲಿತವಾಗಿ ನಡೆಯುವಂತೆ ಕಾಳಜಿ ವಹಿಸುವ ಭರವಸೆ ನೀಡಿದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಷಣ್ಮುಖಪ್ಪ ಮುಚ್ಚಂಡಿ ಮಾತನಾಡಿ, ಸಾಲ ಮರುಪಾವತಿಗೆ ಸಂಬಂಧಿಸಿದಂತೆ ವಿಶೇಷ ಕಾಳಜಿ ವಹಿಸಿದರೆ ಮಾತ್ರ ಬ್ಯಾಂಕ್ ಸೇವೆ ಒದಗಿಸಲು ಸಾಧ್ಯ. ಇವರೆಗೆ ಬಾಕಿ ಇರುವ ಬ್ಯಾಂಕಿನ ಸಾಲ ಮರುಪಾವತಿಸುವಂತೆ ಸಾಲಗಾರರನ್ನು ಪ್ರೇರೇಪಿಸಿ, ಗ್ರಾಹಕರು ಬ್ಯಾಂಕಿನೊಂದಿಗೆ ಉತ್ತಮ ಸಂಪರ್ಕ ಉಳಿಸಿಕೊಳ್ಳುವಂತೆ ಕಾಳಜಿ ವಹಿಸಲಾಗುತ್ತದೆ ಎಂದರು.
ಈ ಸಂದರ್ಭ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಬಸವರಾಜ ಬೆಲ್ಲದ, ಪಿಎಲ್,ಡಿ ಬ್ಯಾಂಕ್ ಅಧ್ಯಕ್ಷ ಎಸ್.ಎಂ. ಸಿಂಧೂರ, ವ್ಯವಸ್ಥಾಪಕ ಎಸ್.ಎಸ್. ಬಮ್ಮಿಗಟ್ಟಿ, ಫಕ್ಕೀರೇಶ ಕನ್ನೇಶ್ವರ, ಟಿಎಪಿಸಿಎಂಎಸ್ ಅಧ್ಯಕ್ಷ ವಿಜಯೇಂದ್ರ ಕನವಳ್ಳಿ, ಬಸವರಾಜ ಕೋರಿ, ಗ್ರಾಪಂ ಅಧ್ಯಕ್ಷೆ ನಂದಿನಿ ವಿರುಪಣ್ಣನವರ, ಜಿಪಂ ಮಾಜಿ ಸದಸ್ಯ ಕೃಷ್ಣ ಈಳಗೇರ, ವಿಶ್ವನಾಥ ಭಿಕ್ಷಾವತಿಮಠ, ಬಿ.ವೈ. ಮಾಳೋದೆ ಉಪಸ್ಥಿತರಿದ್ದರು.