ಮತದಾನ ಹಕ್ಕು ಚಲಾಯಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 3
18 ವರ್ಷ ತುಂಬಿದ ದೇಶದ ಎಲ್ಲ ಪ್ರಜೆಗಳು ಮತದಾನದಿಂದ ಹೊರಗುಳಿಯದಂತೆ ಜಾಗೃತಿ ವಹಿಸುವ ಅಗತ್ಯವಿದ್ದು, ಮತದಾನವನ್ನು ಪ್ರತಿಯೊಬ್ಬರು ಹಕ್ಕನ್ನಾಗಿ ಚಲಾಯಿಸಬೇಕು ಎಂದು ಹಾನಗಲ್ಲ ತಹಸೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಡಾ, ನಾಗೇಂದ್ರ ಹೊನ್ನಳ್ಳಿ ಕರೆ ನೀಡಿದರು.
ಬುಧವಾರ ಹಾನಗಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿರುವ 18 ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವ್ಯವಸ್ಥಿತ ಮತದಾನ ಹಾಗೂ ಎಲ್ಲರ ಪಾಲ್ಗೊಳ್ಳುವಿಕೆ ಮತ್ತು ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರಾಸಕ್ತಿ ತ್ಯಜಿಸಿ: ಯುವಕರು ಮತದಾರರು ಮತದಾನದಲ್ಲಿ ನಿರಾಸಕ್ತಿ ತೋರಬಾರದು. ಕಡ್ಡಾಯ ಹಾಗೂ ಪ್ರಜ್ಞಾಪೂರ್ವಕ ಮತದಾನ ಅಗತ್ಯ. ಪ್ರತಿಯೊಬ್ಬ ಪ್ರಜೆ ವಿವೇಚನೆಗೊಳಪಟ್ಟು ಮತದಾನ ಮಾಡಬೇಕು ಎಂದರು. ಏಪ್ರಿಲ್ 7ರ ವರೆಗೆ ಮತದಾರರಾಗಲು ಅವಕಾಶವಿದ್ದು, ಸರಿಯಾದ ದಾಖಲೆ ನೀಡಿ ಮತಪಟ್ಟಿಯಲ್ಲಿ ಹೆಸರು ನಮೂದಾಗುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನದ ನಿಯಮಗಳನ್ನು ಪಾಲಿಸಬೇಕು. ರಾಷ್ಟ್ರದ ಮೇಲಿನ ಪ್ರೀತಿಗಾಗಿ ಅಣ್ಣಾಹಜಾರೆ ಅವರ ಹೋರಾಟವನ್ನು ನಾವು ಲಕ್ಷ್ಯ ವಹಿಸಬೇಕು. ಯುವಕರು ಮತದಾನದಲ್ಲಿ ಪಾಲ್ಗೊಳ್ಳಬೇಕು, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿ ಬಿ.ವೈ. ಬಂಡಿವಡ್ಡರ ಪ್ರತಿಜ್ಞಾವಿಧಿ ಬೋಧಿಸಿದರು. ಪುರಸಭೆ ಮುಖ್ಯಾಧಿಕಾರಿ ಎ. ರಮೇಶ ಮಾತನಾಡಿ, ಕಡ್ಡಾಯ ಮತದಾನ ನಮ್ಮ ಆದ್ಯತೆಯಾಗಬೇಕು. ಇದಕ್ಕಾಗಿ ಸರ್ಕಾರ ಅವಕಾಶಗಳನ್ನು ನೀಡುತ್ತಿದೆ. ಅವಕಾಶ ವಂಚಿತರಾಗದೆ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಕರೆ ನೀಡಿದರು.
ಸಾಹಿತಿ ಪ್ರೊ, ಮಾರುತಿ ಶಿಡ್ಲಾಪುರ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ, ಚಂದ್ರಪ್ಪ ನರಸಗೊಂಡರ, ಬಿಸಿಎಂ ಇಲಾಖೆ ವಿಸ್ತೀರ್ಣಾಧಿಕಾರಿ ಎನ್.ಎಂ. ಪೂಜಾರ ಇದ್ದರು.