ಏತ ನೀರಾವರಿ ಪುನಾ ಆರಂಭಿಸಿ: ರೈತರು
ಹಿರೇಕೆರೂರು: ತಾಲೂಕಿನ ಯಲಿವಾಳ ಏತ ನೀರಾವರಿ ಯೋಜನೆಯ ಒಂದನೆ ಹಂತ ಮತ್ತು ಎರಡನೆ ಹಂತಗಳನ್ನು ಪುನಃ ಆರಂಭಿಸಿ ಈ ಭಾಗದ ರೈತರ ಕೃಷಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ರೈತ ಸಂಘದ (ಪ್ರೊ. ನಂಜುಂಡ ಸ್ವಾಮಿ ಬಣ)ದ ರೈತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರು ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಯೋಜನೆ ಆರಂಭಿಸಿದ್ದರು. ಈ ಮೂಲಕ ಯಲಿವಾಳ ಸೇರಿದಂತೆ ಕವಳಿಕುಪ್ಪಿ ಮತ್ತು ರಟ್ಟಿಹಳ್ಳಿ ಈ ಭಾಗದ ರೈತರಿಗೆ ನೀರಾವರಿ ಕಲ್ಪಿಸಲಾಗಿತ್ತು ಎಂದರು. ಸಣ್ಣ ನೀರಾವರಿ ಇಲಾಖೆಯವರು ವಿದ್ಯುತ್ ಪಾವತಿಸದಿರುವುದರಿಂದ ರೈತರ ಜಮೀನುಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಯಿತು. ಯಂತ್ರಗಳು ತುಕ್ಕು ಹಿಡಿದು ಹಾಳಾಗಿವೆ. ಆದರೆ, ಇದುವರೆಗೆ ವಿದ್ಯುತ್ ಬಿಲ್ ಮಾತ್ರ ಪ್ರತಿ ತಿಂಗಳು ಬರುತ್ತಿದೆ. ಕಾರಣ ಸ್ಥಗಿತಗೊಂಡ ಏತ ನೀರಾವರಿ ಯೋಜನೆಯನ್ನು ಪುನಃ ಆರಂಭಿಸಿ ರೈತರ ಜಮೀನಿಗೆ ನೀರಾವರಿ ಅನುಕೂಲ ಕಲ್ಪಿಸಬೇಕೆಂದರು. ಮನವಿಯನ್ನು ತಹಸೀಲ್ದಾರ್ ಟಿ.ಬಿ. ಹೊಸೂರಗೆ ಸಲ್ಲಿಸಿದರು. ರೈತರಾದ ಮಲ್ಲನಗೌಡ ಸೊರಟೂರ, ಉಮೇಶ ಹೊಸಮನಿ, ವೀರಬಸಯ್ಯ ಬಣಕಾರ, ಸುರೇಶ ಹುಲ್ಲತ್ತಿ, ಮಲ್ಲೇಶ ಪೂಜಾರ, ಇನ್ನಿತರರಿದ್ದರು.