ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೃಷಿಗಾಗಿ ಬಸ್ ನಿಲ್ದಾಣ ಸದ್ಬಳಕೆ

Vishwanath S
Updated On : 5 Apr 2013, 10:53 am

ಬ್ಯಾಡಗಿ: ಕೃಷಿ ಇಲಾಖೆ ತನ್ನ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪ್ರಚಾರಗೊಳಿಸಲು ಹಾಗೂ ರೈತರಲ್ಲಿ ಅರಿವು ಮೂಡಿಸಲು ವಿನೂತನ ಮಾರ್ಗ ಕಂಡುಕೊಂಡಿದೆ. ಈವರೆಗೂ ಬೃಹದಾಕಾರದ ನಾಮಫಲಕಗಳನ್ನು ಬಳಸುತ್ತಿದ್ದ ಇಲಾಖೆ ಇದೀಗ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಬಸ್ ತಂಗುದಾಣದ ಗೋಡೆಗಳನ್ನು ಬಳಸುತ್ತಿದೆ.
ಇಲಾಖೆಯ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚಾರ ಮಾಡಲು ಗ್ರಾಮ ಸೇವಕರು, ರೇಡಿಯೋ, ದಿನಪತ್ರಿಕೆ, ಕೈಪಿಡಿ, ಗ್ರಾಪಂ ಕಾರ್ಯಾಲಯ, ಕರಪತ್ರ, ದೂರದರ್ಶನದಲ್ಲಿ ಪ್ರಾಯೋಜಿತ ವರದಿ ನೀಡುವುದು ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಸರ್ಕಾರ ಪ್ರತಿವರ್ಷ ಇದಕ್ಕಾಗಿ ನೂರಾರು ಕೋಟಿ ಅನುದಾನವನ್ನು ವೆಚ್ಚ ಮಾಡುತ್ತಾ ಬಂದಿದೆ.
ಹೈಟೆಕ್ ಟಚ್: 10 ವರ್ಷಗಳಿಂದೀಚೆಗೆ ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದು, ಕೃಷಿ ಇಲಾಖೆ ಅಂತರ್ಜಾಲದ ಮೂಲಕ ತಮ್ಮ ಕಾರ್ಯಕ್ರಮಗಳನ್ನು ರೈತರಿಗೆ ನೀಡುವ ಪ್ರಯತ್ನಕ್ಕೆ ಮುಂದಾಗಿದೆ. ನಿರಕ್ಷರಿಗಳೇ ಹೆಚ್ಚಾಗಿರುವ ರೈತ ಸಮುದಾಯ ಹಾಗೂ ಇಚ್ಛಾಶಕ್ತಿ ಕೊರತೆ ಪರಿಣಾಮ ಕೇವಲ ಬೆರಳೆಣಿಕೆಯಷ್ಟು ರೈತರು ಇದರ ಸೌಲಭ್ಯ ಪಡೆದುಕೊಳ್ಳಲು ಮಾತ್ರ ಶಕ್ತವಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಸರಳ ಮಾರ್ಗೋಪಾಯ: ಈವರೆಗೂ ಕೃಷಿ ಬೀಜ ಮಾರಾಟದ ಖಾಸಗಿ ಕಂಪನಿಗಳ ಜಾಹೀರಾತು ಹಾಗೂ ಚಲನ ಚಿತ್ರಗಳ ಭಿತ್ತಿಪತ್ರಗಳಿಗೆ ಮೀಸಲಿದ್ದ ಬಸ್ ತಂಗುದಾಣಗಳು ನೋಡುಗರಿಗೆ ಮುಜುಗರ ಉಂಟು ಮಾಡಿದ್ದಂತೂ ಸತ್ಯ. ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿರುವ ಇಂತಹ ತಂಗುದಾಣದ ಕಟ್ಟಡಗಳನ್ನೇ ಇದೀಗ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಕೃಷಿ ಇಲಾಖೆ ಕಟ್ಟಡದ ಗೋಡೆಗಳ ಮೇಲೆ ಇಲಾಖೆ ಕಾರ್ಯಕ್ರಮಗಳನ್ನು ಬರೆಸಿದ್ದು, ತನ್ಮೂಲಕ ಪ್ರಚಾರಕ್ಕಾಗಿ ಸರಳ ಮಾರ್ಗೋಪಾಯ ಕಂಡುಕೊಂಡಿದೆ. ಸಹಜವಾಗಿ ಪ್ರತಿದಿನ ಒಂದಿಲ್ಲೊಂದು ಕಾರಣಕ್ಕೆ ರೈತರು ತಂಗುದಾಣಗಳಿಗೆ ತೆರಳುತ್ತಾರೆ. ಹೀಗಾಗಿ ಇದರ ಸದ್ಬಳಕೆಯಾಗಲಿದೆ ಎಂಬುದು ಇಲಾಖೆ ನಂಬಿಕೆ.
ಏನೇನಿದೆ..!: ಸರ್ವಜ್ಞನ ವಚನಗಳಿಂದ ಹಿಡಿದು ಕೃಷಿ ಇಲಾಖೆಯ ಭೂಚೇತನ, ಕೃಷಿ ಸಂಸ್ಕರಣ, ಸಾವಯವ ಕೃಷಿ, ಗೊಬ್ಬರ ಬಳಕೆ ವಿಧಾನ, ಕೀಟಬಾಧೆ ಇನ್ನಿತರ ಮಾಹಿತಿಗಳು ತಂಗುದಾಣದ ಕಟ್ಟಡದಲ್ಲಿ ರಾರಾಜಿಸುತ್ತಿವೆ. ಹಸಿರು ಬಣ್ಣದಿಂದ ತುಂಬಿರುವ ಈ ತಂಗುದಾಣಗಳು ಕೃಷಿಕರಿಗೆ ಅಗತ್ಯ ಸಲಹೆ, ಸೂಚನೆ ನೀಡುತ್ತಿವೆಯಲ್ಲದೆ ವೈಜ್ಞಾನಿಕ ಕೃಷಿ ಪದ್ಧತಿ ಬಿಂಬಿಸುತ್ತಿವೆ.
ಭೂಚೇತನಕ್ಕೆ ಹೆಚ್ಚು ಒತ್ತು ನೀಡಿರುವ ಇಲಾಖೆಯು ಫಲವತ್ತತೆ ಕಳೆದುಕೊಂಡಿರುವ ಕೃಷಿ ಜಮೀನಿಗೆ ಜಿಂಕ್ ಸಲ್ಫೇಟ್, ಜಿಪ್ಸಂ, ಬೋರಾನ್, ಪಿಎಸ್‌ಬಿ, ಟ್ರೈಕೋಡರ್ಮಾ ಇನ್ನಿತರ ಪೋಷಕಾಂಶಗಳ ಮಾಹಿತಿ, ಕೃಷಿಭೂಮಿಯಲ್ಲಿ ಮಣ್ಣಿನ ಸಂರಕ್ಷಣೆ ಜೊತೆಗೆ ಫಲವತ್ತತೆ ಹೆಚ್ಚಿಸುವುದು ಸೇರಿದಂತೆ, ಕೃಷಿ ಇಲಾಖೆಯು ರೈತರಿಗೆ ನೀಡಲಿರುವ ಬಿತ್ತನೆ ಬೀಜದ ಜೊತೆಗೆ ಶೇ. 50ರ ಸಹಾಯಧನದ ಮಾಹಿತಿ ಇಲ್ಲಿದೆ.

-ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement