ಒಗ್ಗಟ್ಟಿನಿಂದ ಕನ್ನಡ ಭಾಷೆ, ನೆಲ-ಜಲ ರಕ್ಷಣೆ
ರಾಣಿಬೆನ್ನೂರು: ಸಮಸ್ತ ಕನ್ನಡಿಗರು ಸ್ವಾಭಿಮಾನಿಗಳಾಗಿ ಹೋರಾಟ ನಡೆಸಿದರೆ ಮಾತ್ರ ಸಮಸ್ತ ಕನ್ನಡಿಗರ ಆಸ್ತಿಯಾಗಿರುವ ಕನ್ನಡ ಭಾಷೆ ಹಾಗೂ ನೆಲ, ಜಲದ ರಕ್ಷಣೆ ಸಾಧ್ಯವೆಂದು ಚೌಡಯ್ಯದಾನಪುರದ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ನುಡಿದರು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಹಾವೇರಿ, ತಾಲೂಕು ಘಟಕ ರಾಣಿಬೆನ್ನೂರು ಆಶ್ರಯದಲ್ಲಿ ತಾಲೂಕಿನ ಕೆರಿಮಲ್ಲಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ವಾಭಿಮಾನಿ ಕನ್ನಡಿಗರ ತಾಲೂಕು ಸಮಾವೇಶ ಹಾಗೂ ಕೆರಿಮಲ್ಲಾಪುರ ಗ್ರಾಮ ಘಟಕ ಉದ್ಘಾಟನಾ ಸಮಾರಂಭದ ಸಾನ್ನಿದ್ಯ ವಹಿಸಿ ಮಾತನಾಡಿದರು.
ರಾಜ್ಯದ ಹಿತಕ್ಕೆ ಶ್ರಮಿಸಿ: ರಾಜ್ಯದ ಸಮಸ್ತ ಕನ್ನಡಿಗರ ಆಸ್ತಿಗಳೆಂದು ಕರೆಯಲ್ಪಡುವ ನಾಡಿನ ನೆಲ, ಜಲ, ಭಾಷೆಗಳಿಗೆ ಧಕ್ಕೆ ಬರುವಂತಹ ರೀತಿಯಲ್ಲಿ ಅನ್ಯ ಭಾಷಿಕರು ನಡೆದುಕೂಳ್ಳುತ್ತಿರುವ ಕಾರಣ, ಸ್ವಾಭಿಮಾನಿಗಳಾದ ಕನ್ನಡಿಗರು ಹೋರಾಟ ನಡೆಸುವುದರಲ್ಲಿ ತಪ್ಪಿಲ್ಲ.
ರಾಜ್ಯದ ಜನರೇ ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿರುವ ಸಮಯದಲ್ಲಿ ಕುಡಿಯುವುದಕ್ಕಾಗಿ ಡ್ಯಾಂನಲ್ಲಿ ಸಂಗ್ರಹಿಸಿರುವ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಹಾಗೂ ನ್ಯಾಯಾಲಯದ ಆದೇಶ ಪಾಲಿಸಬೇಕೆಂದು ಹೇಳುತ್ತಿರುವ ತಮಿಳಿಗರಿಗೆ ತಕ್ಕ ಉತ್ತರ ಹೇಳಲು ರಾಜ್ಯದ ಜನತೆ ಸಿದ್ದರಾಗಬೇಕೆಂದು ತಿಳಿಸಿದರು.
ಕನ್ನಡಿಗರ ರಕ್ಷಣೆ ಅಗತ್ಯ: ರಾಜ್ಯದ ಗಡಿನಾಡುಗಳಾದ ಬೆಳಗಾವಿ, ಕಾಸಗೂಡು, ಬಳ್ಳಾರಿ, ಬೀದರ, ಬೇಂಗಳೂರು ಸೇರಿದಂತೆ ಇತರೆಡೆ ಕನ್ನಡ ಭಾಷೆಗೆ ಹಾಗೂ ಕನ್ನಡಿಗರ ಮೇಲೆ ಇತರೆ ಭಾಷಿಕರು ನಿತ್ಯ ಒಂದಿಲ್ಲ ಒಂದು ರೀತಿ ತೂಂದರೆ ನೀಡುತ್ತಿದ್ದು, ಗಡಿನಾಡಿನಲ್ಲಿರುವ ಕನ್ನಡಿಗರ ರಕ್ಷಣೆಗಾಗಿ ಸ್ವಾಭಿಮಾನಿ ಕನ್ನಡಿಗರು ಮುಂದಾಗಬೇಕು.
ಕನ್ನಡ ನಾಡು ನುಡಿ, ನೆಲ, ಜಲ ಭಾಷೆ ರಕ್ಷಣೆಗಾಗಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವುದು ಶ್ಲಾಘನಿಯವೆಂದು ಚಿತ್ರಶೇಖರ ಶ್ರೀಗಳು ನುಡಿದರು.
ಸ್ವಾರ್ಥ ಸಾಧನೆ ಸಲ್ಲ: ಸ್ವಾಭಿಮಾನಿ ಕರವೇ ಕೇರಿಮಲ್ಲಾಪುರ ಗ್ರಾಮ ಘಟಕ ಉದ್ಘಾಟಿಸಿದ ತಾಲೂಕಿನ ಹನುಮನಹಳ್ಳಿ ಗ್ರಾಮದ ಹಾಲಸಿದ್ದೇಶ್ವರ ಮಠದ ವೇದಮೂರ್ತಿ ಹಾಲ ಶಿವಯೋಗಿಗಳು ಮಾತನಾಡಿ, ಕನ್ನಡ ನಾಡು, ನುಡಿ ರಕ್ಷಣೆ ಹೆಸರಿನಲ್ಲಿ ರಾಜ್ಯಧಾನಿ ಬೆಂಗಳೂರಿನಲ್ಲಿ ಹುಟ್ಟಿಕೊಂಡಿರುವ ಕೆಲವು ಕನ್ನಡ ಪರ ಸಂಘಟನೆಗಳು ರಾಜ್ಯಧಾನಿಯಲ್ಲಿ ಮಾತ್ರ ಹೋರಾಟ ನಡೆಸುತ್ತಾ ತಮ್ಮ ಸ್ವಾರ್ಥ ಸಾಧನೆ ಸಾಧಿಸಿಕೊಳ್ಳುತ್ತಿವೆ.
ಉತ್ತರ ಕರ್ನಾಟಕದ ದ್ವಾರ ಬಾಗಿಲಿನ ಹಾವೇರಿ ಜಿಲ್ಲೆಯಲ್ಲಿ ಹುಟ್ಟಿರುವ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಮಸ್ತ ಕನ್ನಡಿಗರ ರಕ್ಷಣೆಗಾಗಿ ಹೋರಾಟ ನಡೆಸಲು ಮುಂದಾಗಬೇಕೆಂದು ತಿಳಿಸಿದರು.
ಸ್ವಾಭಿಮಾನಿ ಕರವೇ ಸಂಸ್ಧಾಪಕ ಹಾಗೂ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ಸ್ವಾಕರವೇ ರಾಜ್ಯದ ಸಮಸ್ತ ರಕ್ಷಣೆ ಜೊತೆಗೆ ರಾಜ್ಯದ ನಾಡು-ನುಡಿ, ನೆಲ-ಜಲದ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದು,ಶ್ರೀಲಂಕಾದಲ್ಲಿರುವ ತಮಿಳರ ರಕ್ಷಣೆಗಾಗಿ ತಮಿಳುನಾಡು ರಾಜಕೀಯ ಪಕ್ಷದ ಮುಖಂಡರು ಒಟ್ಟಾಗಿ,ಶ್ರೀಲಂಕಾದಲ್ಲಿರುವ ತಮಿಳರಿಗೆ ಬೆಂಬಲಿಸಿ ಕೇಂದ್ರ ಸರ್ಕಾರಕ್ಕೆ ತಾವು ನಿಡಿದ್ದ ಬೆಂಬಲ ವಾಪಸ್ ಪಡೆದ ರೀತಿಯಲ್ಲಿಯೇ ಕರ್ನಾಟಕದಿಂದ ಆಯ್ಕೆಯಾಗಿರುವ ಎಂಪಿಗಳು ರಾಜ್ಯದ ಹಿತ ಕಾಪಾಡುವುದು ಹಾಗೂ ರಾಜ್ಯದ ಸಮಸ್ತ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದರು. ಸ್ವಾಭಿಮಾನಿ ಕರವೇ ಕೇರಿಮಲ್ಲಾಪುರ ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಿತ್ತಲಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎಂ. ಚಿರಂಜಿವಿ, ತಾಲೂಕು ಅಧ್ಯಕ್ಷ ಶಿದ್ದಾರೂಢ ಗುರಂ, ಸಂಘಟನಾ ಕಾರ್ಯದರ್ಶಿ ಶೆಟ್ಟೇರ್, ಶಂಕ್ರಪ್ಪ ದಿವಟೇರ, ಮಲ್ಲಿಕಾರ್ಜುನ ಪಾಟೀಲ, ಶಿದ್ದಪ್ಪ ದೇವಗಿರಿ, ಹೊನ್ನಪ್ಪ ಹರಿಜನ ಉಪಸ್ದಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರ ದೇವಿ ಮೂರ್ತಿಯ ಮೇರವಣಿಗೆ ನಡೆಸಲಾಯಿತು.