ಕಳಪೆ ಕಾಮಗಾರಿಗೆ ಕಿತ್ತ ಸಿಡಿ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 5
ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ ಮೂರೇ ತಿಂಗಳಲ್ಲೇ 3 ಸಿಡಿಗಳು ಕಿತ್ತು ಹೋಗಿ ಸಾರ್ವಜಿನಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ತಪ್ಪಿತಸ್ಥ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಬನ್ನಿಹಟ್ಟಿ ಗ್ರಾಪಂ ವ್ಯಾಪ್ತಿಯ ರಾಮಗೊಂಡನಹಳ್ಳಿಯಲ್ಲಿ 2011-12ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ ರು. 35 ಸಾವಿರ ವೆಚ್ಚದಲ್ಲಿ ಒಂದು, 2012-13 ಸಾಲಿನ ಯೋಜನೆಯಡಿ ರು. 1ಲಕ್ಷ ವೆಚ್ಚದಲ್ಲಿ ಎರಡು ಸಿಡಿಗಳನ್ನು ನಿರ್ಮಿಸಲಾಗಿತ್ತು. ಆದರೆ, ಅವು ನಿರ್ಮಿಸಿದ ಮೂರೇ ತಿಂಗಳಲ್ಲಿ ಕಿತ್ತು ಹೋಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘ ಹಾಗೂ ಹಸಿರು ಸೇನೆ ು ರಾಮಗೊಂಡನಹಳ್ಳಿ ಗ್ರಾಮ ಘಟಕಾಧ್ಯಕ್ಷ ಚಿಟ್ಟಪ್ಪ ಚಳಗೇರಿ ಮಾತನಾಡಿ, ಹಳ್ಳಿಗಳಲ್ಲಿ ಅಭಿವೃದ್ಧಿಗೆ ಸರ್ಕಾರ ಮೊದಲಿನಿಂದಲೂ ನಿರ್ಲಕ್ಷಿಸುತ್ತಾ ಬಂದಿದೆ. ತಾಲೂಕು ಮಟ್ಟದ ಕಚೇರಿಗಳಿಗೆ ಅಲೆದಾಡಿ ಒಂದು ಬಾರಿ ಕಾಮಗಾರಿ ಮಾಡಿಸಿಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ಕಳಪೆ ಕಾಮಗಾರಿ ನಡೆಸುವುದರಿಂದ ಗ್ರಾಮಸ್ಥರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಕೃಷಿಕರೇ ಹೆಚ್ಚಿದ್ದು, ರಸ್ತೆಯಲ್ಲಿನ ಸಿಡಿಗಳು ಕಿತ್ತು ಹೋಗಿದ್ದರಿಂದ ಜನ, ಜಾನುವಾರು, ಚಕ್ಕಡಿಗಳು, ಚಿಕ್ಕಮಕ್ಕಳು ವೃದ್ಧರ ಸಂಚಾರಕ್ಕೆ ತೊಂದರೆಯಾಗಿದೆ. ಕಿತ್ತು ಹೋಗಿರುವ ಸಿಡಿಗಳಲ್ಲಿ ಜಾನುವಾರು ಅನೇಕ ಸಲ ಕಾಲುಗಳನ್ನು ಸಿಲುಕಿಸಿಕೊಂಡು ನೋವು ಅನುಭವಿಸಿವೆ. ಅವುಗಳ ಮೂಕ ರೋದನ ಗ್ರಾಪಂ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಗ್ರಾಪಂ ಮಾಜಿ ಸದಸ್ಯ ಬೀರಪ್ಪ ಕೆಂಚನಗೌಡ್ರ ಮಾತನಾಡಿ, ಹಳ್ಳಿಗಳಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಇರುವುದಿಲ್ಲ. ಕತ್ತಲಲ್ಲಿ ಜನತೆ, ಜಾನುವಾರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಸಿಡಿಗಳ ಮಾರ್ಗವಾಗಿ ಸಂಚರಿಸುವುದು ಕಷ್ಟವಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಹಲವಾರು ಬಾರಿ ಈ ಸಮಸ್ಯೆ ಪರಿಹರಿಸುವಂತೆ ವಿನಂತಿಸಿದರೂ ಇತ್ತಕಡೆ ತಿರುಗಿ ನೋಡಿಲ್ಲ ಎಂದು ಆರೋಪಿಸಿದರು.
ಗ್ರಾಮದ ಆರಾಧ್ಯ ದೈವ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಏ. 24ರಂದು ಜರುಗಲಿದೆ. ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರು ಸಿಡಿಗಳಿರುವ ರಸ್ತೆ ಮೂಲಕವೇ ದೇವಸ್ಥಾನಕ್ಕೆ ತೆರಳುತ್ತಾರೆ. ರಥೋತ್ಸವ ನಡೆಸಲು ಸಾಧ್ಯವಿಲ್ಲ. ಜಾತ್ರೆ ನಡೆಯುವ ಅವಧಿಯೊಳಗೆ ಸಿಡಿಗಳನ್ನು ದುರಸ್ತಿ ಪಡಿಸಬೇಕೆಂದು ದೇವಸ್ಥಾನ ಸಮಿತಿ ಅಧ್ಯಕ್ಷ ಸೋಮಪ್ಪ ಗೌಡ್ರ ಒತ್ತಾಯಿಸಿದರು.
ಪಿಡಿಓ ಬಿ.ವಿ. ನಂದಿಹಳ್ಳಿ ಮಾತನಾಡಿ, ಕಿತ್ತು ಹೋಗಿರುವ ಸಿಡಿಗಳ ವಿಷಯ ತಮ್ಮ ಗಮನಕ್ಕೆ ಬಂದಿದೆ. ಪೂರ್ವ ಮಾಹಿತಿಯಿಲ್ಲದ ಗ್ರಾಮದ ಕೆಲವರು ಸಿಡಿಗಳಿಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿದ ಮರುದಿನವೇ ಸಿಡಿಗಳ ಮೇಲೆ ವಾಹಗಳು ಸಂಚರಿಸಿದ್ದರಿಂದ ಬೇಗನೇ ಕಿತ್ತು ಹೋಗಿವೆ. ಇದರಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯವೂ ಕಾರಣವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಭರಮಪ್ಪ ಕಾಡಮ್ಮನವರ, ರಾಮಪ್ಪ ಹಂಚಿನಮನಿ, ಹಾಲಪ್ಪ ಗಾಣಿಗೇರ, ಗುಡ್ಡಪ್ಪಹಂಚಿನಮನಿ, ನಾಗಪ್ಪ ಕೆಂಚನಗೌಡ್ರ, ವೀರಬಸಪ್ಪ ಮುದಿಗೌಡ್ರ, ಯಲ್ಲನಗೌಡ ಪಾಟೀಲ್, ಬೀರಪ್ಪ ಕೆಂಚನಗೌಡ್ರ, ಸಿದ್ದಪ್ಪ ಆಡಿನವರ ಇತರರು ಇದ್ದರು.