ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆ ಡಿಎಸ್‌ಎಸ್ ಸಭೆ

Vishwanath S
Updated On : 6 Apr 2013, 11:52 am

ಹಾನಗಲ್ಲ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾನಗಲ್ಲ ತಾಲೂಕು ಘಟಕ ಮತ್ತು ಗ್ರಾಮ ಭೀಮಶಕ್ತಿ ಕೇಂದ್ರದ ಸಂಚಾಲಕರ ಸಭೆ ಏ. 7ರಂದು ತಾಲೂಕಿನ ನಾಲ್ಕರ ಕ್ರಾಸ್ ಸಮೀಪವಿರುವ ಭೂತೇಶ್ವರ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದೆ. ಜಿಲ್ಲಾ ಸಂಚಾಲಕ ನಿಂಗಪ್ಪ ಗಾಳೆಮ್ಮನವರ ಸಭೆಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಗುಡುದಪ್ಪ ರಾಜಿನಾಮೆ
ಹಾನಗಲ್ಲ
: ಭಾರತೀಯ ಜನತಾ ಪಕ್ಷದ ಹಾನಗಲ್ಲ ತಾಲೂಕು ಘಟಕದ ಉಪಾಧ್ಯಕ್ಷ ಯಳವಟ್ಟಿ ಗ್ರಾಮದ ಗುಡುದಪ್ಪ ನವರದ ತಮ್ಮ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಕುರಿತು ರಾಜಿನಾಮೆ ಪತ್ರವನ್ನು ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ ಅವರಿಗೆ ರವಾನಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

ಮಾಸನಕಟ್ಟಿ ನೇಮಕ
ಹಾನಗಲ್ಲ:
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಸಂಘಟನಾ ಕಾರ್ಯದರ್ಶಿಯನ್ನಾಗಿ ತಾಲೂಕಿನ ಅರಳೇಶ್ವರ ಗ್ರಾಮದ ಶಿವಪ್ಪ ಮಾಸನಕಟ್ಟಿ ಅವರನ್ನು ಅಧ್ಯಕ್ಷ ಸಿ.ಎಸ್. ಬಡಿಗೇರ ನೇಮಕ ಮಾಡಿದ್ದಾರೆ.

ಎಂ.ಆರ್. ಪಾಟೀಲ್ ನೇಮಕ
ಹಾನಗಲ್ಲ:
ಕರ್ನಾಟಕ ಜನತಾ ಪಕ್ಷದ ಹಾನಗಲ್ಲ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಜಿಪಂ ಮಾಜಿ ಸದಸ್ಯ ಎಂ.ಆರ್. ಪಾಟೀಲ ನೇಮಕಗೊಂಡಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಮೈಲಪ್ಪ ಗುಡಗೂರ ಈ ನೇಮಕ ಮಾಡಿದ್ದು, ಎಂ.ಎಚ್. ಬ್ಯಾಡಗಿ (ಪ್ರಧಾನ ಕಾರ್ಯದರ್ಶಿ), ನಾಗರಾಜ ಕರೆಣ್ಣನವರ (ಕಾರ್ಯಾಲಯ ಕಾರ್ಯದರ್ಶಿ), ಬಸವರಾಜ ಬೂದಿಹಾಳ (ಯುವ ಘಟಕದ ಅಧ್ಯಕ್ಷ), ಪುಟ್ಟರಾಜ ಚಿಂಚಿ (ಯುವ ಘಟಕದ ಪ್ರಧಾನ ಕಾರ್ಯದರ್ಶಿ), ಚಂದ್ರಣ್ಣ ಹರಿಜನ (ಎಸ್‌ಸಿ ಮೋರ್ಚಾ ಅಧ್ಯಕ್ಷ), ರತ್ನಮ್ಮ ಗುಡ್ಡದಮತ್ತಿಹಳ್ಳಿ (ಮಹಿಳಾ ಮೋರ್ಚಾ ಅಧ್ಯಕ್ಷೆ) ನೇಮಕಗೊಂಡಿದ್ದಾರೆ.

ರಾಣಿಬೆನ್ನೂರು: 23ರಿಂದ ಹನುಮಂತ ರಥೋತ್ಸವ
ರಾಣಿಬೆನ್ನೂರು:
ನಗರದ ಅಡವಿ ಆಂಜನೇಯ ಬಡಾವಣೆಯಲ್ಲಿರುವ ಅಡವಿ ಹನುಮಂತ ದೇವರ ರಥೋತ್ಸವ ಏ. 23ರಂದು ನಡೆಯಲಿದೆ. ಏ. 23ರಂದು ಕಂಕಣ ಹಾಗೂ ಅನ್ನಸಂತರ್ಪಣೆ, 25ರಂದು ಸಂಜೆ 5 ಗಂಟೆಗೆ ದೊಡ್ಡ ರಥೋತ್ಸವ, 26ರಂದು ಸಂಜೆ ಬೆಲ್ಲದ ಬಂಡಿ ಮತ್ತು ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಜ್ಞಾನೇಶ್ವರ ನೇಮಕ
ಗದಗ:
ಕನ್ನಡ ಜನಾಭಿವೃದ್ಧಿ ವೇದಿಕೆಯ ಗದಗ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನಗರದ ಜ್ಞಾನೇಶ್ವರ ಖೋಕಲೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ರೇಮಶ ಅಬ್ಬಿಗೇರಿ ತಿಳಿಸಿದ್ದಾರೆ.

ನೀರು ಪೂರೈಕೆ ಮಾಹಿತಿ
ಗದಗ:
ನಗರದ ಹಾತಲಗೇರಿ ನಾಕಾ, ಚರ್ಚ್ ರಸ್ತೆ, ಪಂಚಾಕ್ಷರಿ ನಗರ, ವಿವೇಕಾನಂದ ರಸ್ತೆ, ಗಣಪತಿಗುಡಿ ಲೈನ್, ಧ್ಯಾಮನಗೌಡ್ರ ಲೈನ್ ಈ ಭಾಗಗಳಲ್ಲಿ ಶನಿವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು.

ಇಂದು ಜಾಗೃತಿ ಅಭಿಯಾನ
ನರಗುಂದ:
ಪಟ್ಟಣದ ಸೋಮಾಪುರ ಬಡಾವಣೆಯ 3ನೇ ನಂ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾರರ ಜಾಗೃತಿ ಅಭಿಯಾನವನ್ನು ಏ. 6ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ತಾಪಂ ಅಧಿಕಾರಿ ಡಿ.ವಿ. ಪಾಟೀಲ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಇಂದು ಕಲಾ ಪ್ರದರ್ಶನ
ಗದಗ:
  ಗದಗಿನ ವಿಜಯ ಚಿತ್ರಕಲಾ ಮಹಾವಿದ್ಯಾಲಯ ನೇತೃತ್ವದಲ್ಲಿ ಏ. 6 ಮತ್ತು 7ರಂದು ಪ್ರೊ.ವಿ.ಬಿ. ಹಿರೇಗೌಡ್ರ ಹಾಗೂ ಎನ್. ಮರಿಶಾಮಚಾರ್ ಸ್ಮರಣಾರ್ಥ ಹಂಪಿ ಆರ್ಟ್ ಸ್ಟ್ರೋಕ್ಸ್ ಕಲಾ ಪ್ರದರ್ಶನ ಜರುಗಲಿದೆ. ಏ. 6ರಂದು ಬೆಳಗ್ಗೆ 10 ಗಂಟೆಗೆ ಉಪವಿಭಾಗಾಧಿಕಾರಿ ಇಸ್ಲಾವುದ್ದಿನ ಗದ್ಯಾಳ ನೆರವೇರಿಸುವರು. ಪಿಎಸ್‌ಐ ಟಿ. ಮಹಾಂತೇಶ, ಡಾ.ಎಂ.ಕೆ. ಗಿರೀಶ, ಎಂ.ಎಲ್. ಗುಳೇದಗುಡ್ಡ, ಕೆ.ಎ. ಕುಂದಗೋಳ, ರವೀಂದ್ರ ಕಮ್ಮಾರ, ಅಶೋಕ ಅಕ್ಕಿ, ಸತೀಶ ಬಾಗಮಾರ, ಸಂಜಯ ಬಾಗಮಾರ, ವಿನೋದ ಅಕ್ಕಿ, ಎಸ್.ಸಿ. ವಸ್ತ್ರದ, ಸಿದ್ದು ಶೆಟ್ಟಿ, ಎಸ್.ಎಫ್. ಬೆನಕಣ್ಣವರ, ಪ್ರೊ.ಪ್ರೇಮಾ ಹಂದಿಗೋಳ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ಸಂಶಯ: ವ್ಯಕ್ತಿ ಬಂಧನ
ರಾಣಿಬೆನ್ನೂರು:
ಇಲ್ಲಿನ ಶಹರ ಠಾಣೆ ವ್ಯಾಪ್ತಿಯ ನೆಹರು ಮಾರ್ಕೆಟ್‌ನಲ್ಲಿ ಶುಕ್ರವಾರ ಬೆಳಗ್ಗೆ 5.45ರ ಸುಮಾರಿಗೆ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ರಾಮಚಂದ್ರ ಶೇಖಪ್ಪ ಹಾವನೂರ ಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರಾಣಿಬೆನ್ನೂರಿನ ನಿವಾಸಿ. ರಾಣಿಬೆನ್ನೂರು ಶಹರ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ರೋಹಿಣಿ ಆರ್. ಪಾಟೀಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಆಕಸ್ಮಿಕ ಬೆಂಕಿ: ಆಸ್ತಿ ಹಾನಿ
ರಾಣಿಬೆನ್ನೂರು:
ತಾಲೂಕಿನ ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯ ವಾಸನ ಗ್ರಾಮದ ವೀರೇಶ ಕರಿಯಪ್ಪ ಪೂಜಾರ ಎಂಬುವವರ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. 4 ವರ್ಷದ 70 ಮಾವು, 7 ಚಿಕ್ಕು, 80 ಪೇರಲ, 18 ತೆಂಗು, 1,500 ನುಗ್ಗಿ, 25 ನಿಂಬೆ, 125 ಸಾಗವಾನಿ ಗಿಡಗಳು ನಾಶವಾಗಿದ್ದರೆ, ನೀರಾವರಿ ಪೈಪ್‌ಗಳಿಗೆ ಹಾನಿಯಾಗಿ ಸುಮಾರು ರು. 1.5 ಲಕ್ಷ ನಷ್ಟ ಉಂಟಾಗಿದೆ. ವೀರೇಶ ಕರಿಯಪ್ಪ ಪೂಜಾರ ರಾಣಿಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆಡೂರು ಪೊಲೀಸ್ ಠಾಣೆ ಪಿಎಸ್‌ಐ ತನಿಖೆ ಕೈಗೊಂಡಿದ್ದಾರೆ.

ಬಾಲಕ ಕಾಣೆ
ಸವಣೂರು:
ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಯಲವಿಗಿ ಪರಮವಾಡಿ ತಾಂಡಾದಿಂದ ದೇವರಾಜ ಶಂಕರಪ್ಪ ಚವ್ಹಾಣ್ (14) ಎಂಬ ಬಾಲಕ ಮಾರ್ಚ್ 18ರಂದು ಮನೆಯಲ್ಲಿ ಸ್ಕೂಲ್ ಬ್ಯಾಗ್ ಇಟ್ಟು ಹೋದವನು ಹಿಂತಿರುಗಿಲ್ಲ. ಕಾಣೆಯಾದ ಬಾಲಕನ ತಾಯಿ ಶಾಂತವ್ವ ಶಂಕರಪ್ಪ ಚವ್ಹಾಣ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸವಣೂರು ಪೊಲೀಸ್ ಠಾಣೆ ಪಿಎಸ್‌ಐ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement