ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನೀತಿ ಸಂಹಿತೆ ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಿ

Vishwanath S
Updated On : 6 Apr 2013, 11:48 am

ಹಾವೇರಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಪೂರ್ವ ಸಿದ್ಧತಾ ಸಭೆ ಜರುಗಿತು.
ಈ ಸಭೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಮತ್ತಿತರ ಅಧಿಕಾರಿಗಳು ನಿರ್ವಹಿಸಬೇಕಾದ ಪ್ರಕ್ರಿಯೆಗಳ ಬಗ್ಗೆ ಜಿಲ್ಲಾಧಿಕಾರಿ ವಿವರಿಸಿದರು.
ಚುನಾವಣಾ ಕಾರ್ಯನಿರತ ಅಧಿಕಾರಿಗಳು ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ಹೋಬಳಿ ಮಟ್ಟದಲ್ಲಿ ನೀತಿ ಸಂಹಿತೆ ಹಾಗೂ ಚುನಾವಣಾ ಪ್ರಕ್ರಿಯೆ ಮೇಲೆ ನಿಗಾ ಇರಿಸಲು ನೇಮಕಗೊಂಡಿರುವ ಫ್ಲೈಯಿಂಗ್ ಸ್ಕ್ವಾಡ್ ದಕ್ಷವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ತಂಡದ ಸದಸ್ಯರಿಗೆ ವಾಹನವನ್ನು ಒದಗಿಸಲಾಗುವುದು. ಅಬಕಾರಿ ಹಾಗೂ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನೀತಿ ಸಂಹಿತೆ ಉಲ್ಲಂಘನೆ ಪ್ರಕಣಗಳು ಕಂಡುಬಂದಲ್ಲಿ, ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೊಂ ನಂ 249041 ಇಲ್ಲವೇ, 249051ಗೆ ತಕ್ಷಣ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿ ಕಠಿಣ ಕ್ರಮಗಳನ್ನು ಕೈಕೊಳ್ಳಬೇಕಾದ ಪ್ರಸಂಗ ಬಂದಾಗ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಚುನಾವಣೆಯ ಮತ ಎಣಿಕೆ ಕಾರ್ಯ ಇಲ್ಲಿವರೆಗೆ ಜಿ.ಎಚ್. ಮಹಾವಿದ್ಯಾಲಯದಲ್ಲಿ ನಡೆಯುತ್ತಿತ್ತು. ಈ ಬಾರಿ ನೂತನ ಸರ್ಕಾರಿ ಎಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಚೇತನಸಿಂಗ್ ರಾಠೋರ್, ಜಿಪಂ ಸಿಇಓ ಉಮೇಶ ಕುಸುಗಲ್ಲ, ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ನೀತಿ ಸಂಹಿತೆ ಅಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್‌ನ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಬಳಿಕ ಜಿಲ್ಲಾಧಿಕಾರಿ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ನೀತಿ ಸಂಹಿತೆ ಅನುಷ್ಠಾನ ಮತ್ತಿತರ ಚುನಾವಣೆ ಸಂಬಂಧಿ ನಿಯಮಾವಳಿಗಳ ಪಾಲನೆ ಬಗ್ಗೆ ವಿವರಿಸಿದರು.
ನೋಂದಣಿಗೆ ಎರಡೇ ದಿನ: ಮತದಾರರ ನೋಂದಣಿ ಕಾರ್ಯವನ್ನು ಅಧಿಕಾರಿಗಳು ಮತಗಟ್ಟೆಯಿಂದ ಆರಂಭಿಸಿದ್ದು, ನೋಂದಣಿ ಕಾರ್ಯಕ್ಕೆ ಕೇವಲ ಎರಡು ದಿನಗಳು ಬಾಕಿ ಇವೆ. ಏಪ್ರಿಲ್ 7 ಕೊನೆ ದಿನವಾಗಿದೆ. ಮತದಾರರ ನೋಂದಣಿಗೆ ರಾಜಕೀಯ ಪಕ್ಷಗಳು ನೆರವಾಗಬೇಕೆಂದು ವಿನಂತಿಸಿದರು. ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement