ಬಡವರ ಹಿತಕ್ಕೆ ಶ್ರಮಿಸಿದ ಡಾ.ಬಾಬೂಜಿ
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 5
ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಒಬ್ಬ ಧೀಮಂತ ಹೋರಾಟಗಾರರಾಗಿ ನಿಮ್ನ ವರ್ಗದ ಜನರ ಏಳ್ಗೆಗೆ ಶ್ರಮಿಸಿದ್ದರಲ್ಲದೆ, ಎಲ್ಲ ಬಡ ವರ್ಗದ ಜನರ ಹಿತರಕ್ಷಣೆಗೆ ಹೋರಾಡಿದವರು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಉಪ ಪ್ರಧಾನಿ ದಿ. ಬಾಬು ಜಗಜೀವನರಾಂ ಅವರ 106ನೇ ಜಯಂತಿ ನಿಮಿತ್ತ ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಡಾ.ಬಾಬೂಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಡಾ.ಬಾಬು ಜಗಜೀವನ ರಾಂ ಭಾರತದ ರಕ್ಷಣಾ ಸಚಿವರಾಗಿ ಹಾಗೂ ಕೃಷಿ ಸಚಿವರಾಗಿ ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗೆ ಕಾರಣಕರ್ತರಾಗಿದ್ದಾರೆ. ಅವರ ಉದಾತ್ತ ವಿಚಾರಗಳನ್ನು ಇಂದು ನಾವು ಜೀವನದಲ್ಲಿ ರೂಢಿಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಠೋರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್, ಅಪರ ಜಿಲ್ಲಾಧಿಕಾರಿ ಜಿ. ಜಗದೀಶ, ಸಮಾಜ ಕಲ್ಯಾಣಾಧಿಕಾರಿ ಎಸ್.ಸಿ. ತಿರ್ಲಾಪುರ, ಉಪ ವಿಭಾಗಾಧಿಕಾರಿಗಳು, ಜಿಪಂ ಅಧಿಕಾರಿಗಳು ಹಾಗೂ ಜಿಲ್ಲಾ ಆಡಳಿತ ಭವನದ ವಿವಿಧ ಇಲಾಖಾ ಅಧಿಕಾರಿಗಳು ಸಿಬ್ಬಂದಿ ಮತ್ತು ವಿವಿಧ ದಲಿತ ಸಂಘಟನೆ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.