ವರ್ಷದೊಳಗೆ ಕೆಜೆಪಿ ನೆಲಕಚ್ಚುತ್ತೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 5
ಜಿಲ್ಲೆಯಲ್ಲಿ ಜನ್ಮತಾಳಿರುವ ಪ್ರಾದೇಶಿಕ ಪಕ್ಷ ಕೆಜೆಪಿ ವರ್ಷಾಂತ್ಯದೊಳಗೆ ನೆಲಕಚ್ಚಲಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಬೆಳಗಾವಿಗೆ ತೆರಳುವ ಮುನ್ನ ನಗರದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಅವರ ಮನೆಯಲ್ಲಿ ಏರ್ಪಡಿಸಿದ್ದ ಚಹಾ ಕೂಟದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಐದು ವರ್ಷಗಳಲ್ಲಿ ಬಿಜೆಪಿ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿದೆ. ಸರ್ಕಾರದ ಸಾಧನೆಗಳು, ಪಕ್ಷದಲ್ಲಿರುವ ಪ್ರಾಮಾಣಿಕ ಕಾರ್ಯಕರ್ತರ ಶ್ರಮದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮೇ 5ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಾತ್ರ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿದ್ದು, ಕೆಲವೆಡೆ ಜೆಡಿಎಸ್ ಸ್ಪರ್ಧೆ ಒಡ್ಡಲಿದೆ. ಪ್ರಾದೇಶಿಕ ಪಕ್ಷ ಕೆಜೆಪಿ ನಮಗೆ ಎದುರಾಳಿ ಅಲ್ಲ ಎಂದರು.
ಜಿಲ್ಲೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕರು ಬೇರೆ ಪಕ್ಷ ಸೇರಿದರೂ ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ ಎದೆಗುಂದದೆ ಪಕ್ಷವನ್ನು ಬಲಪಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಸತಿ ಸಚಿವ ವಿ. ಸೋಮಣ್ಣ ಯಾವ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಜನ್ಮ ತಾಳಿರುವ ಕೆಜೆಪಿ ವರ್ಷಾಂತ್ಯದೊಳಗೆ ಸಾಯುತ್ತದೆ, ಸಂದೇಹ ಬೇಡ. ಹಕ್ಕು ಚಲಾಯಿಸುವ ಮುನ್ನ ಮತದಾರರು ಯೋಚಿಸಬೇಕು. ಐದು ವರ್ಷಗಳಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸಿದ ಹೊಲಸು ಮನಸ್ಸಿನ ಕೆಲವರು ಈಗ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪರಿಶುದ್ಧವಾಗಿದೆ. ಐದು ವರ್ಷಗಳಲ್ಲಿ ಜಾರಿಗೆ ತಂದ ಯೋಜನೆಗಳೆಲ್ಲ ಬಿಜೆಪಿ ಸರ್ಕಾರದವು. ಪಕ್ಷ ನೀಡಿದ ಎಲ್ಲ ಅಧಿಕಾರ ಅನುಭವಿಸಿ ಕೊನೆಗೆ ತಾವೇ ಸುಪ್ರೀಂ, ಹೈಕಮಾಂಡ್ ಆಗಲು ಹೊರಟವರು ಬೇರೆ ಪಕ್ಷ ಕಟ್ಟಿದ್ದಾರೆ.
ಹಣದ ಆಮಿಷ ತೋರಿಸಿ ಕಾರ್ಯಕರ್ತರನ್ನು ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು, ಜನತೆ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಪಕ್ಷದ ಹೆಸರಿನಲ್ಲಿ ಸಂಸದರಾಗಿರುವ ಶಿವಕುಮಾರ ಉದಾಸಿ ತಮ್ಮ ತಂದೆ ಸಿ.ಎಂ. ಉದಾಸಿಯವರ ಗೆಲುವಿಗಾಗಿ ಕೆಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ಮಂಡಳಿ ನಿರ್ಧರಿಸಲಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಡಾ.ಬಸವರಾಜ ಕೇಲಗಾರ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅರುಣಕುಮಾರ ಪೂಜಾರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿರಣ್ಣ ಅಂಗಡಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಮಂಜುನಾಥ ಗೌಡ ಶಿವಣ್ಣನವರ, ರವಿ ಕಂಬಳಿ, ಕೃಷ್ಣಾ ಬತ್ತಲ್ಲ ಉಪಸ್ಥಿತರಿದ್ದರು.