ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸೂಕ್ತ ಬೆಲೆ ನಿರೀಕ್ಷೆಯಲ್ಲಿ ಮಾವು ಬೆಳೆಗಾರ

Vishwanath S
Updated On : 6 Apr 2013, 11:56 am

ಹಾನಗಲ್ಲ: ಬೆಳೆ ವೈಫಲ್ಯದಿಂದ ಆತಂಕದಲ್ಲಿರುವ ಹಾನಗಲ್ಲ ತಾಲೂಕಿನ ಮಾವು ಬೆಳಗಾರ ಮಾರುಕಟ್ಟೆಗೆ ಅಲ್ಪಸ್ವಲ್ಪ ಮಾವು ಸಾಗಿಸುತ್ತಿರುವನಾದರೂ ಬೆಳೆ, ಬೆಲೆ ಹಾಗೂ ನಿಖರ ಆದಾಯದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲದೆ ಬೆಸತ್ತು ಹೋಗಿದ್ದಾನೆ.
ಮಾರುಕಟ್ಟೆ ವಿಷಯದಲ್ಲಿಯಂತು ರೈತನ ಆತಂಕ ಹೇಳತೀರದು. ಹಾನಗಲ್ಲ ನಗರದ ಆನೆಕೆರೆ ಪಕ್ಕ ಹಾಗೂ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಾತ್ರ ವ್ಯಾಪಾರಸ್ಥರು ಮಾವು ಖರೀದಿಸುತ್ತಾರೆ. ಈವರೆಗೆ ಯಾರೂ ಮಾವು ಖರೀದಿಗೆ ಬಂದಿರಲಿಲ್ಲ. ಕೆಲ ಮಾವು ಬೆಳೆಗಾರರು ಹುಬ್ಬಳ್ಳಿಗೆ ಮಾವು ರವಾನಿಸಿದ್ದಾರೆ. ಆದರೆ, ಯಾರಿಗೂ ಮಾವು ಮಾರಾಟವಾಗುವ ಬೆಲೆ ಮಾತ್ರ ಇಂದಿನವರೆಗೂ ಖಚಿತವಾಗಿ ತಿಳಿದಿಲ್ಲ. ಒಂದು ಕೆಜಿ ಮಾವಿಗೆ ರು. 80ರಿಂದ ರು. 20ರ ವರೆಗೆ ಬೆಲೆ ನಿಗದಿಯಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮಾವಿನ ಬೆಲೆ ದಿನದಿಂದ ದಿನಕ್ಕೆ ಲೆಕ್ಕ ತಪ್ಪಿಸುತ್ತದೆ. ಒಂದೇ ದಿನದಲ್ಲಿ ದಿಢೀರ ಕೆಳಕ್ಕೆ ಬರುವ ಸಾಧ್ಯತೆಯೂ ಉಂಟು ಎನ್ನುತ್ತಾರೆ ರೈತರು ಹಾಗೂ ವ್ಯಾಪಾರಸ್ಥರು.
ವಿಶ್ವಾಸ: ಹಾನಗಲ್ಲ ತಾಲೂಕಿನಲ್ಲಿ ಅಂದಾಜು 25 ಸಾವಿರ ಎಕರೆ ಮಾವಿನ ತೋಟಗಳಿವೆ ಎಂದು ಅಂದಾಜಿಸಲಾಗಿದೆ. ಪ್ರಸಕ್ತ ವರ್ಷ ಅಂದಾಜು ಶೇ. 40ರಿಂದ 50ರಷ್ಟು ಫಸಲು ಕಡಿಮೆಯಾಗಿದೆ ಎಂಬುದು ವ್ಯಾಪಾರಸ್ಥರು ಹಾಗೂ ರೈತರ ಲೆಕ್ಕಾಚಾರವಾಗಿದೆ.
ವಿವಿಧ ತಳಿ: ಹಾನಗಲ್ಲ ತಾಲೂಕಿನಲ್ಲಿ ವಿಶೇಷವಾಗಿ ಆಪೂಸು ಮಾವು ಹೆಚ್ಚು ಬೆಳೆಯಲಾಗುತ್ತದೆ. ಇದಲ್ಲದೆ ಸಿಂಧುಲಾ, ಪೈರಿ, ತೋತಾಪುರಿ, ಅಲ್ಲದೆ ಹೆಸರಿಲ್ಲದ ಹಲವು ಜವಾರಿ ಮಾವನ್ನು ಇಲ್ಲಿ ಬೆಳೆಯಲಾಗುತ್ತದೆ. ಆದರೆ, ಮಾವಿನ ಗುಣಮಟ್ಟದ ಮೇಲೆ ಬೆಲೆ ನಿಗದಿಯಾಗುತ್ತದೆ. ಒಂದು ಮಾವು ಅಂದಾಜು 250ರಿಂದ 300 ಗ್ರಾಂ ತೂಕವಿದ್ದು, ಉತ್ತಮ ಹಣ್ಣಾಗಿದ್ದರೆ ಅದನ್ನು ವಿದೇಶಕ್ಕೆ ರವಾನಿಸಲಾಗುತ್ತದೆ. ಗುಣಮಟ್ಟವಿಲ್ಲದ ಹಣ್ಣನ್ನು ಕಾರ್ಖಾನೆಗಳಿಗೆ ರವಾನಿಸಲಾಗುತ್ತದೆ. ಹಾನಗಲ್ಲ ತಾಲೂಕು ಹಾವೇರಿ, ಶಿವಮೊಗ್ಗ, ಕಾರವಾರ ಜಿಲ್ಲೆಗಳ ಮಾವು ಹಾನಗಲ್ಲಿನಲ್ಲಿ ಮಾರಾಟವಾಗುತ್ತದೆ. ಹಾನಗಲ್ಲ ನಗರದ ದಕ್ಷಿಣ ದಡದಲ್ಲಿ ಎಚ್‌ಕೆಎಚ್ ಅವರ ಮಾವು ಮಾರಾಟ ಮಂಡಿ ಹಾಗೂ ಹಾನಗಲ್ಲ ಉತ್ತರ ದಡದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವು ಖರೀದಿ ಆರಂಭವಾಗಿದೆ. ಏನೇ ಆದರೂ ಈ ಬಾರಿ ಮಾವು ರೈತನ ಕೈ ಹಿಡಿಯಲಿಲ್ಲ. ಈವರೆಗೆ ಮಳೆ ಬಂದಿಲ್ಲ. ದೊಡ್ಡ ಹಾಗೂ ಆಣೆಕಲ್ಲಿನ ಮಳೆ ಬಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಮಾವು ಫಸಲು ಹಾಳಾಗುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement