ಏತ ನೀರಾವರಿ ಪೂರ್ಣಗೊಳಿಸಲು ಶ್ರಮ: ಬಳ್ಳಾರಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 6
ಅಪೂರ್ಣಗೊಂಡಿರುವ ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆ ಗುಡ್ಡದಮಲ್ಲಾಪುರ ಏತ ನೀರಾವರಿಯನ್ನು ಪೂರ್ಣಗೊಳಿಸಲು ಶ್ರಮಿಸುವುದಾಗಿ ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಬಳ್ಳಾರಿ ಆಶ್ವಾಸನೆ ನೀಡಿದರು.
ಶನಿವಾರ ತಾಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ಮತ ಯಾಚನೆ ಮಾಡಿದ ಅವರು, ಗ್ರಾಮೀಣ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿವಿಧ ಯೋಜನೆ ಜಾರಿಗೆ ತಂದಿದೆ. ಸುವರ್ಣ ಗ್ರಾಮ, ಸ್ವಚ್ಛ ಗ್ರಾಮ ಯೋಜನೆ ಅನುಷ್ಠಾನಗೊಳಿಸಿ, ಮೂಲಸೌಕರ್ಯ ಒದಗಿಸಿದ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ರು. 40 ಕೋಟಿ ಹಾಗೂ ತುಂಗಾ ಮೇಲ್ದಂಡೆ ಯೋಜನೆಗೆ ರು. 900 ಕೋಟಿ ಅನುದಾನ ಒದಗಿಸಿದೆ ಎಂದರು. ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅನೇಕರು ಬಿಜೆಪಿ ಸೇರುತ್ತಿರುವುದು ತಮಗೆ ಹೆಚ್ಚುತ್ತಿರುವ ಜನ ಬೆಂಬಲಕ್ಕೆ ಸಾಕ್ಷಿ ಎಂದರು. ಬಿಸಲಹಳ್ಳಿ ಗ್ರಾಪಂ ಅಧ್ಯಕ್ಷ, ಸದಸ್ಯರು, ಕೆಜೆಪಿ ಮುಖಂಡ ಶೇಖರಗೌಡ ಗೌಡ್ರ ಮತ್ತು ಬೆಂಬಲಿಗರು ಬಿಜೆಪಿ ಸೇರಿದರು. ತಾಲೂಕು ಬಿಜೆಪಿ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ಉಕ್ಕುಂದ, ಶಂಕರಗೌಡ ಪಾಟೀಲ, ಜಯಣ್ಣ ಮಲ್ಲಿಗಾರ, ಪ್ರವೀಣ ಬಳ್ಳಾರಿ, ವೀರಭದ್ರಗೌಡ ಹೊಮ್ಮರಡಿ, ಶಂಕ್ರಣ್ಣ ಅಕ್ಕಿ, ಗ್ರಾಪಂ ಸದಸ್ಯ ಚಂದ್ರಣ್ಣ ಕಾಕೋಳ, ನಿಂಗನಗೌಡ ಗೌಡ್ರ ಉಪಸ್ಥಿತರಿದ್ದರು.