ಕಾರ್ಮಿಕರ ಪಟ್ಟು: ಹದಗೆಟ್ಟ ಬ್ಯಾಡಗಿ ಪರಿಸರ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 6
ಪಟ್ಟಣದ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರ್ವಹಣೆಗೆ ಖಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹಿಂಜರಿಯುತ್ತಿರುವ ಸ್ಥಳೀಯ ಪುರಸಭೆ ಮದ್ಯವರ್ತಿಗಳಿಗೆ ಗುತ್ತಿಗೆ ನೀಡುತ್ತಿದೆ. ನೀಡಿದ ಹಣಕ್ಕೆ ತಕ್ಕ ಕೆಲಸ ಪಡೆಯಲಾಗದ ಪುರಸಭೆಯು ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮೂರನೇಯವರ ಪಾಲು ಮಾಡುತ್ತಿದ್ದುದು ಇಲ್ಲಿನ ಪುರಸಭೆ ಇದಕ್ಕೊಂದು ತಾಜಾ ಉದಾಹರಣೆ.
ಸಂಧಾನ ವಿಫಲ: ಗುತ್ತಿಗೆದಾರ ನೀಡುತ್ತಿರುವ ವೇತನ ಸಾಕಾಗುವುದಿಲ್ಲ. ವೇತನ ಹೆಚ್ಚಿಸುವವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿರುವ 36 ಗುತ್ತಿಗೆ ಪೌರ ಕಾರ್ಮಿಕರು ಕಳೆದೊಂದು ವಾರದಿಂದ ಸ್ವಚ್ಚತಾ ಕಾರ್ಯ ಸ್ಥಗಿತಗೊಳಿಸಿದ್ದು, ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಯಿಂದ ಪಟ್ಟಣದ ನೈರ್ಮಲ್ಯ ಸಂಪೂರ್ಣ ಹಾಳಾಗಿದೆ.
ಪುರಸಭೆ ನೂತನ ಸದಸ್ಯರು ಮತ್ತು ಮುಖ್ಯಾಧಿಕಾರಿ ಮೂರ್ನಾಲ್ಕು ಬಾರಿ ಸಭೆಗಳನ್ನು ನಡೆಸಿ ಸಂಧಾನಕ್ಕೆ ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಟ್ಟಣದ ನೈರ್ಮಲ್ಯ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿದೆ.
ಪ್ರಶಸ್ತಿಗೆ ಮಸಿ: ಕಾರ್ಮಿಕರ ಪ್ರತಿಭಟನೆಯಿಂದಾಗಿ ಪಟ್ಟಣದ ಬಹುತೇಕ ಭಾಗಗಳಲ್ಲಿ ಕಸದ ರಾಶಿಗಳು ಎಲ್ಲೆಂದರಲ್ಲಿ ಬಿದ್ದಿದ್ದು ವಾಸನೆ ಬೀರುತ್ತಿವೆ. ಇದರಿಂದ ರೋಗಗಳು ಹರಡುವ ಭೀತಿ ಎದುರಾಗಿದ್ದು, 3 ಬಾರಿ ಅತ್ಯುತ್ತಮ ಪುರಸಭೆ ಪ್ರಶಸ್ತಿಗೆ ಭಾಜನವಾಗಿರುವ ಸ್ಥಳೀಯ ಪುರಸಭೆಯು ಕಾರ್ಯವೈಖರಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ ಎನ್ನುತ್ತಾರೆ ನಿವೃತ್ತ ನೌಕರ ಶಿವಣ್ಣ ಕುಡಕೇರ.
ಕೈಸೇರದ ಹಣ: ಪ್ರತಿ ಕಾರ್ಮಿಕನಿಗೆ ದಿನಕ್ಕೆ ರು. 155ನಂತೆ (ತಿಂಗಳಿಗೆ ರು. 4,650) ಒಟ್ಟು 40 ಪೌರ ಕಾರ್ಮಿಕರಿಗೆ ವೇತನ ಅನ್ವಯವಾಗುವಂತೆ ಮಾರುತಿ ಹಂಜಗಿ ಎಂಬುವರು ಗುತ್ತಿಗೆ ಪಡೆದಿದ್ದರು. ಆದರೆ, ಗುತ್ತಿಗೆದಾರ ಮಾತ್ರ ಕೇವಲ ರು. 3,600 ನೀಡುತ್ತಾ ಬಂದಿದ್ದು, ಕಾರ್ಮಿಕರು ಇದನ್ನು ವಿರೋಧಿಸಿದ್ದರಿಂದ ಕಳೆದ ವರ್ಷದಿಂದೀಚೆಗೆ ರು. 4 ಸಾವಿರ ನೀಡುತ್ತಿದ್ದು, ಇಷ್ಟೊಂದು ಕಡಿಮೆ ಹಣದಲ್ಲಿ ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ.. ಎಂಬುದು ಪೌರ ಕಾರ್ಮಿಕರ ಪ್ರಶ್ನೆ.
ವೇತನ ಪರಿಷ್ಕರಣೆಯಾಗಿಲ್ಲ: ಪ್ರಸಕ್ತ ನಿಯಮದಂತೆ ಪೌರಕಾರ್ಮಿಕರಿಗೆ ರು. 6080 ನೀಡಬೇಕಾಗಿದೆ. ಆದರೆ, ಗುತ್ತಿಗೆದಾರನ ಕೈಗೊಂಬೆಯಂತೆ ವರ್ತಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿ ವೇತನ ಪರಿಷ್ಕರಿಸದೇ 2009-10 ಅನ್ವಯದಂತೆ ಕಳೆದ 2 ವರ್ಷಗಳಿಂದ ಮಾಸಿಕ ರು. 4,650 ವೇತನ ನೀಡುತ್ತಾ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಗುತ್ತಿಗೆ ಪೌರಕಾರ್ಮಿಕರು ಕಳೆದ ಏ. 1ರಿಂದ ಸ್ವಚ್ಛತೆ ಕಾರ್ಯ ಸ್ಥಗಿತಗೊಳಿಸಿದ್ದು, ಬಡವರ ಹೊಟ್ಟೆ ಮೇಲೆ ಹೊಡೆದು ಬದುಕುತ್ತಿರುವ ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಿ, ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಕಾರ್ಮಿಕ ಪರುಶರಾಮ ಹರಿಜನ ಆಗ್ರಹಿಸುತ್ತಾರೆ.
ಕಾರ್ಮಿಕ ಇಲಾಖೆ ಆದೇಶ ಲೆಕ್ಕಕ್ಕಿಲ್ಲ: ಸ್ಥಳೀಯ ಪುರಸಭೆಯು ಕಾರ್ಮಿಕ ಇಲಾಖೆಯ ಬಹುತೇಕ ಎಲ್ಲ ಆದೇಶಗಳನ್ನು ಧಿಕ್ಕರಿಸಿದೆ. ದಿನಕ್ಕೆ 8 ತಾಸು ಕೆಲಸ ನಿರ್ವಹಿಸಬೇಕೆನ್ನುವ ನಿಯಮವಿದ್ದರೂ ಸಹ ಗುತ್ತಿಗೆದಾರ 10ರಿಂದ 12 ತಾಸಿಗೂ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ವಿಮೆ, ಭವಿಷ್ಯ ನಿಧಿ, ಇನ್ನಿತರ ಸೌಲಭ್ಯಗಳು ಪೌರಕಾರ್ಮಿಕರಿಗೆ ಲಭ್ಯವಾಗುತ್ತಿಲ್ಲ. ವಾರಕ್ಕೊಮ್ಮೆ 1 ದಿವಸ ರಜೆ ಹಾಗೂ ರಾಷ್ಟ್ರೀಯ ಹಬ್ಬ, ಇನ್ನಿತರ ರಜಾ ದಿನಗಳಲ್ಲಿ ಕೆಲಸ ನಿರ್ವಹಿಸಿದಲ್ಲಿ ಹೆಚ್ಚುವರಿಯಾಗಿ 2 ಪಟ್ಟು ವೇತನ ನೀಡಬೇಕು. ಆದರೆ, ಕಾರ್ಮಿಕ ಇಲಾಖೆ ಯಾವುದೇ ನಿಯಮಗಳು ಇಲ್ಲಿ ಪಾಲನೆಯಾಗುತ್ತಿಲ್ಲ.
ಸೇವಾ ಭದ್ರತೆ ಇಲ್ಲ: ಪುರಸಭೆಯಲ್ಲಿ ಈಗಾಗಲೇ ಖಾಯಂ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಷ್ಟೇ ಶ್ರಮವನ್ನು ಗುತ್ತಿಗೆ ಕಾರ್ಮಿಕರು ಹಾಕುತ್ತಿದ್ದಾರೆ. ಆದರೆ, ಕಾರ್ಮಿಕರ ದುಡಿಮೆಗೆ ತಕ್ಕಂತೆ ಹಣ ಸಿಗುತ್ತಿಲ್ಲ ಎನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಆದರೆ, ಸರ್ಕಾರ ಮಾತ್ರ ಗುತ್ತಿಗೆ ಪೌರ ಕಾರ್ಮಿಕರನ್ನು ಇಂದಿಗೂ ಕಾಯಂಗೊಳಿಸಿಲ್ಲ. ಗುತ್ತಿಗೆದಾರ ಪುರಸಭೆ ಹಾಗೂ ಪೌರ ಕಾರ್ಮಿಕರ ನಡುವಿನ ಸಮರ ಕೊನೆಗೊಳ್ಳುವವರೆಗೂ ಸಾರ್ವಜನಿಕರು ಮಾತ್ರ ಕಸದ ರಾಶಿಗಳಿಂದ ಹೊರಸೂಸುವ ದುರ್ವಾಸನೆ ಸೇವಿಸಿಯೇ ಬದುಕಬೇಕಾಗಿದೆ.
-ಶಿವಾನಂದ ಮಲ್ಲನಗೌಡರ