ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ
ಕ.ಪ್ರ.ವಾರ್ತೆ ಹಾವೇರಿ ಏ.6
ಪೊಲೀಸ್ ಪೇದೆಯೊಬ್ಬ ಕರ್ತವ್ಯದಲ್ಲಿದ್ದಾಗಲೇ ಬಂದೂಕಿನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಜಿಲ್ಲೆಯ ತಡಸ ಠಾಣೆಯಲ್ಲಿ ಜರುಗಿದೆ.
ಗುರುನಾಥ ಮಿಳ್ಳಿ (29) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಶುಕ್ರವಾರ ರಾತ್ರಿ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯ ಪೂರೈಸಿ ಶನಿವಾರ ಬೆಳಗಿನ 4.55ರ ಹೊತ್ತಿಗೆ ಠಾಣೆಗೆ ಮರಳಿದ್ದ ಗುರುನಾಥ್, ಠಾಣೆಯಲ್ಲಿದ್ದ ಎಸ್ಎಚ್ಒಗೆ ಬಂದೂಕು ಹಾಗೂ ಗುಂಡುಗಳನ್ನು ಒಪ್ಪಿಸಿ ಮನೆಗೆ ತೆರಳಿದ್ದರು. ಕರ್ತವ್ಯ ಇಲ್ಲದಿದ್ದರೂ ಬೆಳಗ್ಗೆ 7.30ಕ್ಕೆ ಠಾಣೆಗೆ ಮರಳಿದ ಮಿಳ್ಳಿ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಕೋಣೆಗೆ ತೆರಳಿ ಡಬಲ್ ಬಾರ್ ಬಂದೂಕಿನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಯಕ್ತಿಕ ಕಾರಣವೇ?: 2008ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ಗುರುನಾಥ ಮೂರು ವರ್ಷಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ. ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಆತ್ಮಹತ್ಯೆಗೆ ವೈಯಕ್ತಿಕ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೇದೆ ಗುರುನಾಥ್ಗೆ ಹಿರಿಯ ಅಧಿಕಾರಿಗಳು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿಲ್ಲ. ಆತ ವೈಯಕ್ತಿಕ ಕಾರಣಗಳಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರಬಹುದು. ಪೇದೆ ಕುಟುಂಬದ ಸದಸ್ಯರನ್ನು ವಿಚಾರಿಸಿದರೆ ನಿಜಾಂಶ ತಿಳಿದೀತು.
-ಚೇತನ್ಸಿಂಗ್ ರಾಥೋರ್, ಎಸ್ಪಿ, ಹಾವೇರಿ