ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೋವಿಂದಗೌಡ್ರಗೆ ಟಿಕೆಟ್ ನಿರಾಕರಣೆ:ಜೆಡಿಎಸ್ ಕಚೇರಿಗೆ ಬೆಂಬಲಿಗರ ಮುತ್ತಿಗೆ

Vishwanath S
Updated On : 7 Apr 2013, 11:18 am

ಗದಗ: ವೆಂಕನಗೌಡ ಗೋವಿಂದಗೌಡ್ರಗೆ ನರಗುಂದ ಮತಕ್ಷೇತ್ರದ ಜೆಡಿಎಸ್ ಟಿಕೆಟ್ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಅವರ ಬೆಂಬಲಿಗರು ಶನಿವಾರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಜೆಡಿಎಸ್ ಜಿಲ್ಲಾ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ, ಕಚೇರಿ ಮುಂಭಾಗದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಟಿಕೆಟ್ ಆಕಾಂಕ್ಷಿ ವೆಂಕನಗೌಡ ಗೋವಿಂದಗೌಡ್ರ ಮಾತನಾಡಿ, ಪಕ್ಷದ ಮುಖಂಡರು ಗೆಲುವಿಗಾಗಿ ಶ್ರಮಿಸದೆ ಪಕ್ಷದಲ್ಲಿ ಒಡಕನ್ನು ಉಂಟು ಮಾಡುತ್ತಿದ್ದಾರೆ. ಮಾ. 25ರೊಳಗೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಅರ್ಜಿ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಎಂ.ಎಚ್. ಚಳ್ಳಮರದ, ಹನುಮಂತಗೌಡ ಕಲ್ಮನಿ ಹಾಗೂ ತಾವು ಅರ್ಜಿ ಸಲ್ಲಿಸಿದ್ದೆವು. ಆದರೆ ಶುಕ್ರವಾರ ಬಿಡುಗಡೆಗೊಳಿಸಿರುವ ಜೆಡಿಎಸ್ ಅಧಿಕೃತ ಅಭ್ಯರ್ಥಿಗಳ ಪಟ್ಟಿಯಲ್ಲಿ ವಲಸೆ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ. ಈ ಆಯ್ಕೆಯಲ್ಲಿ ಹಣ, ಜಾತಿಯ ಬಲವೇ ಕಾಣುತ್ತಿದೆ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗದಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡದೆ, ಅನ್ಯ ಜಾತಿಯ ಅಭ್ಯರ್ಥಿಗಳನ್ನು ಉಚ್ಚಾಟಿಸುವ ಮೂಲಕ ಪಕ್ಷವಿರೋಧ ಕೆಲಸದಲ್ಲಿ ತೊಡಗಿದ್ದಾರೆ. ಹೊರಟ್ಟಿ ಒಬ್ಬ ಜಾತಿ ರಾಜಕಾರಣಿ. ಈ ಹಿಂದೆ ತಮ್ಮನ್ನು ನರಗುಂದ ಕ್ಷೇತ್ರಕ್ಕೆ ಅಭ್ಯರ್ಥಿ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ, ಪ್ರತಿ ಗ್ರಾಮಕ್ಕೆ ಭೇಟಿ ನೀಡಿ, ಪಕ್ಷ ಸಂಘಟನೆ ಮಾಡುವ ಮೂಲಕ 8-10 ಸಾವಿರ ಕಾರ್ಯಕರ್ತರ ಪಡೆ ಕಟ್ಟುವಲ್ಲಿ ಯಶಸ್ವಿಯಾಗಿದ್ದೆ. ಆದರೆ, ತಮ್ಮನ್ನು ಕಡೆಗಣಿಸಿ, ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳದ ಅಪರಿಚಿತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ನೋವುಂಟು ಮಾಡಿದೆ ಎಂದರು.
ಕಪ್ಪತ್ತನವರ ಆಯ್ಕೆ ಖಂಡನೀಯ: ಚುನಾವಣೆ ವೇಳೆಯಲ್ಲಿ ಮಾತ್ರ ವಿ.ವಿ. ಕಪ್ಪತ್ತನವರ ಅವರನ್ನೇ ಗದಗ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸುತ್ತಿರುವುದು ಖಂಡನಾರ್ಹ. ಪಕ್ಷದ ಬಲವರ್ಧನೆಗೆ ಶ್ರಮಿಸಿದವರನ್ನು ಕಡೆಗಣಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲೂ ಕಪ್ಪತ್ತನವರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಎಂದರು.
ಟಿಕೆಟ್‌ಗಾಗಿ ರು. 5 ಲಕ್ಷ: ನರಗುಂದ ವಿಧಾನಸಭಾ ಮತಕ್ಷೇತ್ರಕ್ಕೆ ಅಭ್ಯರ್ಥಿಯಾಗಲು ಅರ್ಜಿ ಸಲ್ಲಿಸಿದ್ದೆ. ಕೆಲವು ದಿನಗಳ ಬಳಿಕ ಜಿಲ್ಲಾಧ್ಯಕ್ಷ ಕಪ್ಪತ್ತನವರ ಕರೆ ಮಾಡಿ ಟಿಕೆಟ್ ಬೇಕಾದರೆ ರು. 5 ಲಕ್ಷ ನೀಡುವಂತೆ ಆಗ್ರಹಿಸಿದ್ದರು ಎಂದು ಗಂಭೀರ ಆರೋಪ ಮಾಡಿದ ವಿ.ಆರ್. ಗೋವಿಂದಗೌಡ್ರ, ನಾನು ಹಾಗೂ ಈ ಭಾಗದ ಎಂ.ಎಚ್. ಚಳ್ಳಮರದ, ಹನುಮಂತಗೌಡ ಕಲ್ಮನಿ ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ನಮ್ಮನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿದ್ದು, ಪಕ್ಷ ವಿರೋಧಿ ಕ್ರಮವಾಗಿದೆ.
ಜಿಲ್ಲಾಧ್ಯಕ್ಷರು ನೇರ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದ ಮೂವರೂ ಸೇರಿ ಈ ಕುರಿತು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement