ಜಾನಪದ ಕಲೆ, ಸಂಸ್ಕೃತಿ ರಕ್ಷಿಸಿ: ಮೂಲಗಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 6
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ದೇಶೀಯ ಸಂಪ್ರದಾಯ, ಮೌಲ್ಯಗಳು ಮಾಯವಾಗುತ್ತಲಿವೆ. ಯುವಕರು ಆಸಕ್ತಿಯಿಂದ ಜಾನಪದ ಸಂಸ್ಕೃತಿಯನ್ನು ಸಂರಕ್ಷಿಸಿ, ಬೆಳೆಸಬೇಕು ಎಂದು ಜಾನಪದ ವಿದ್ವಾಂಸ ಡಾ.ರಾಮು ಮೂಲಗಿ ಹೇಳಿದರು.
ಸ್ಥಳೀಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ ಹಾಗೂ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಗ್ರಾಮೀಣ ಕಲೆಯ ಸಂರಕ್ಷಣೆ ನಮ್ಮ ಹೊಣೆ. ಸಾಂಪ್ರದಾಯಿಕ ಕಲೆ-ಸಂಸ್ಕೃತಿಯನ್ನು ಸಂರಕ್ಷಿಸಲು ನಾವು ಯುವಕರನ್ನು ಪ್ರೇರೇಪಿಸಬೇಕು ಎಂದರು.
ಡಾ.ಭಾರತಿ ಹಿರೇಮಠ ಮಾತನಾಡಿ, ಮಡಿವಂತಿಕೆಯಿಂದಾಗಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಕೀಳರಿಮೆ ತೊರೆದು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅವಕಾಶಗಳನ್ನು ಬಳಸಿಕೊಳ್ಳಬೇಕು. ಸಮಸ್ಯೆ ದೊಡ್ಡದಲ್ಲ, ಭಯವೇ ದೊಡ್ಡ ಸಮಸ್ಯೆ. ಅದನ್ನು ದೂರ ಮಾಡಿಕೊಳ್ಳಿ ಎಂದು ಹೇಳಿದರು.
ಡಾ.ಬಿ.ವೈ. ತೊಂಡಿಹಾಳ ಸನ್ಮಾನ ಸ್ವೀಕರಿಸಿ ಮತನಾಡಿದರು. ಶ್ರೀ ರಂಭಾಪುರಿ ಪದವಿ ಕಾಲೇಜಿನ ಆಡಳಿತಾಧಿಕಾರಿ ವಿಶ್ವನಾಥ ಕಂಭಾಳಿಮಠ ಅಧ್ಯಕ್ಷತೆ ವಹಿಸಿದ್ದರು. ಬಿ.ಡಿ. ಈಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ಎ.ಐ. ಕೋಟಿ ಸ್ವಾಗತಿಸಿದರು. ಕುಮಾರ ಶಿವಪುರ ನಿರೂಪಿಸಿದರು. ಈರಣ್ಣ ಬಂಕಾಪುರ ವಂದಿಸಿದರು.