ಜೀವನಕ್ಕಾಗಿ ಸವಾಲು ಸ್ವೀಕರಿಸಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ.7
ತಾಲೂಕಿನ ರಟ್ಟಿಹಳ್ಳಿಯ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ 2012-13ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಸಮಾರೋಪ ಸಮಾರಂಭ ಹಾಗೂ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಜರುಗಿತು.
ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ,ಎನ್.ಬಿ. ಸಂಗಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರಗತಿಯತ್ತ ಸಾಗಿದೆ. ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಮಾನಸಿಕವಾಗಿ ಸವಾಲುಗಳನ್ನು ಸ್ವೀಕರಿಸುತ್ತಾ ಮುಂದಿನ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಿ.ಎಂ. ಸಾಲಿ ಮಾತನಾಡಿ, ಸೇವೆ ಮನೋಭಾವದಿಂದ ಕಟ್ಟಿದ ಪ್ರಿಯದರ್ಶಿನಿ ಸಂಸ್ಥೆ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಸೇವೆ ನೀಡುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ 2012-13ನೇ ಸಾಲಿನ ವರದಿ ವಾಚನವನ್ನು ಉಪನ್ಯಾಸಕ ಎಚ್.ಬಿ. ಕೆಂಚಳ್ಳಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಯು.ಎಲ್. ನಾಡಗೇರ, ಡಾ.ನಾಗಬೂಷಣ, ಡಾ ರಾಮಗಿರಿ, ಅಶೋಕ ಹೆಡಿಯಾಲ, ಎಸ್.ಕೆ. ಕಂಢೇಬಾಗೂರು, ಪ್ರಾಚಾರ್ಯ ಸಿ.ಎಸ್. ಕಮ್ಮಾರ ಮಾತನಾಡಿದರು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆ ನಡೆದವು. ಮಾಲತೇಶ ಸಣ್ಣಜ್ಜೇರ, ಜೆ.ಪಿ. ಪೂಜಾರ, ರಾಕೇಶ ಕುಮಾರ, ಶ್ವೇತಾ ಬಣಕಾರ, ಜ್ಯೋತಿ ಮಾಳಗಿಮನಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸವಿತಾ ಮ್ಯಾಚೇರ, ಬಿ.ಸಿ. ತಿಮ್ಮೇನಹಳ್ಳಿ, ಡಾ.ಅನಿತಾ ಬೇಳಗಾಂವಕರ ಕಾರ್ಯಕ್ರಮ ನಿರ್ವಹಿಸಿದರು.