ನಾಳೆ ಕೆಜೆಪಿ ಸಭೆ
ಹಾನಗಲ್ಲ: ಕರ್ನಾಟಕ ಜನತಾ ಪಕ್ಷದ ಹಾನಗಲ್ಲ ತಾಲೂಕು ಕಾರ್ಯಕರ್ತರ ಸಭೆ ಏ. 9ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಪಕ್ಷದ ತಾಲೂಕಾಧ್ಯಕ್ಷ ಎಂ.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ಚುನಾವಣೆ ಕುರಿತು ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಸಿ.ಎಂ. ಉದಾಸಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಪಕ್ಷದ ಎಲ್ಲ ಘಟಕಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡಬೇಕೆಂದು ಪಕ್ಷದ ಕಾರ್ಯಾಲಯ ಕಾರ್ಯದರ್ಶಿ ನಾಗರಾಜ ಕರೆಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
14ರಂದು ಅಂಬೇಡ್ಕರ್, ಬಾಬೂಜಿ ಜಯಂತಿ
ಹಾನಗಲ್ಲ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಭೀಮಶಕ್ತಿ ಕೇಂದ್ರದ ಪದಾಧಿಕಾರಿಗಳ ಸಭೆ ತಾಲೂಕಿನ ನಾಲ್ಕರ ಕ್ರಾಸ್ ಸಮೀಪದ ಭೂತೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು. ಜಿಲ್ಲಾ ಸಂಚಾಲಕ ನಿಂಗಪ್ಪ ಗಾಳೆಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಏ. 14ರಂದು ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಯಿತು. ನಿಂಗಪ್ಪ ಗಾಳೆಮ್ಮನವರ, ತಾಲೂಕು ಸಂಚಾಲಕ ಫಕ್ಕೀರಪ್ಪ ಕಾಳೇರ ಮಾತನಾಡಿ, ತಾಲೂಕಿನಲ್ಲಿ ಪರಿಶಿಷ್ಟ ಜಾತಿ-ವರ್ಗದ ಮತದಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಸಮಿತಿ ಎಲ್ಲ ಉಪಜಾತಿಯವರಿಗೆ ಯೋಗ್ಯ ಸ್ಥಾನಮಾನ ಸಿಗುವಂತೆ ಪ್ರಾಮಾಣಿಕ ಹೋರಾಟ ನಡೆಸುತ್ತ ಬಂದ ಕಾರಣ ದಲಿತ ಸಮುದಾಯ ಜಾಗೃತಗೊಂಡಿದೆ ಎಂದರು.