ಹಿರೇಕೆರೂರು ಹಿರೇತನ ಯಾರಿಗೆ?
ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಮೇಲ್ನೋಟಕ್ಕೆ ಕಾಂಗ್ರೆಸ್ ಭದ್ರಕೋಟೆ ಎಂಬಂತೆ ಭಾಸವಾದರೂ ಪ್ರಸಕ್ತ ಚುನಾವಣೆಯಲ್ಲಿ ಪರಿಸ್ಥಿತಿ ಕೊಂಚ ಭಿನ್ನವಾಗಿದೆ.
ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬಿಜೆಪಿಯಿಂದ ಸಿಡಿದು ಬಂದು ಪ್ರಾದೇಶಿಕ ಪಕ್ಷ ಕೆಜೆಪಿಯನ್ನು ಹಾವೇರಿಯಲ್ಲೇ ಹುಟ್ಟು ಹಾಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ತಮ್ಮ ತಾಕತ್ತು ಏನೆಂಬುದನ್ನು ತೋರ್ಪಡಿಸಿದ್ದಾರೆ. ಇದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಸ್ವಲ್ಪ ಮಟ್ಟಿಗೆ ನಡುಕ ಮೂಡಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸರ್ವಜ್ಞನ ಹುಟ್ಟೂರನ್ನು ಒಳಗೊಂಡಿರುವ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಕ್ಷೇತ್ರವನ್ನು ಪ್ರತಿನಿಧಿಸಿರುವ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ನಿರೀಕ್ಷಿತ ಮಟ್ಟದಲ್ಲಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಪ್ರಜ್ಞಾವಂತ ಮತದಾರ: 1957ರಿಂದ 1972ರವರೆಗೆ ಸತತ ನಾಲ್ಕು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ ಈ ಕ್ಷೇತ್ರದ ಮತದಾರ, ರಾಜಕೀಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದ್ದಾನೆ ಎಂಬುದಕ್ಕೆ ಆಮೇಲಿನ ಫಲಿತಾಂಶಗಳೇ ಸಾಕ್ಷಿ. ಒಟ್ಟು 10 ವಿಧಾನಸಭೆ ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಐದು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದ ಮತದಾರ, ಆಮೇಲೆ ತಾನೂ ರಾಜಕೀಯ ಚದುರಂಗದಾಟ ಕಲಿತ. ಅವಕಾಶ ಸಿಕ್ಕಾಗಲೆಲ್ಲ ತನ್ನ ಶಕ್ತಿ ಏನೆಂಬುದನ್ನು ಪಕ್ಷಗಳು ಹಾಗೂ ಅಭ್ಯರ್ಥಿಗಳಿಗೆ ತೋರಿಸಿದ. 2008ರ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಅಲೆ ಪ್ರಬಲವಾಗಿದ್ದಾಗಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಚಿತ್ರನಟ ಬಿ.ಸಿ. ಪಾಟೀಲರನ್ನು ಗೆಲ್ಲಿಸಿದ.
ಆಟಕ್ಕುಂಟು ಲೆಕ್ಕಕಿಲ್ಲ: ಹಾವೇರಿ ಜಿಲ್ಲೆಯಲ್ಲಿ ಹೊಸ ಪಕ್ಷ ಕೆಜೆಪಿ ತಕ್ಕ ಮಟ್ಟಿಗೆ ಹಿಡಿತ ಸಾಧಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮಾಜಿ ಸಚಿವ ಸಿ.ಎಂ. ಉದಾಸಿ ಇಡೀ ಜಿಲ್ಲೆಯಲ್ಲಿ ಉತ್ತಮ ಹಿಡಿತ ಸಾಧಿಸಿದ್ದು, ಈ ಬಾರಿ ಕೆಜೆಪಿಗೆ ಪ್ಲಸ್ ಆಗುವುದರಲ್ಲಿ ಅನುಮಾನವಿಲ್ಲ ಎಂಬ ವಿಶ್ವಾಸ ಆ ಪಕ್ಷದ್ದು. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ತೆಂಗಿನಕಾಯಿ ಸದ್ದು ಮಾಡಲಿದೆಯೇ ಎಂಬುದು ಯಕ್ಷಪ್ರಶ್ನೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಲಿಂಗಾಯತ ಕೋಮಿನವರೇ ಪ್ರಾಬಲ್ಯ ಸಾಧಿಸಿದ್ದಾರೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಇಲ್ಲಿ ಕೆಜೆಪಿಯನ್ನು ಅಧಿಕೃತವಾಗಿ ಘೋಷಿಸಿದ್ದು. ಲಿಂಗಾಯತರ ಮತ ಹಂಚಿ ಹೋಗಬಾರದು ಎಂಬ ಕಾರಣಕ್ಕೆ ಬಿಜೆಪಿಯೂ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿಯೂ, ಗೆದ್ದರೆ ಅವರೇ ಮತ್ತೆ ಮುಖ್ಯಮಂತ್ರಿ ಆಗುತ್ತಾರೆಂದೂ ಘೋಷಿಸಿದ್ದು ಗಮನಾರ್ಹ.
ತ್ರಿಕೋನ ಸ್ಪರ್ಧೆ: ಹಿರೇಕೆರೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಬಿ.ಸಿ. ಪಾಟೀಲ ಪುನರಾಯ್ಕೆ ಬಯಸಿದ್ದಾರೆ. ಎರಡು ಅವಧಿಗೆ ಶಾಸಕರಾಗಿದ್ದ ಬಿ.ಜಿ. ಬಣಕಾರ ಅವರ ಪುತ್ರ ಯು.ಬಿ. ಬಣಕಾರ 1994ರಲ್ಲಿ ಗೆಲುವು ದಾಖಲಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರೂ ಬಿ.ಸಿ. ಪಾಟೀಲರಿಗೆ ನೇರ ಸ್ಪರ್ಧೆ ಒಡ್ಡಿದ್ದರು. ಪ್ರಸ್ತುತ ಯು.ಬಿ. ಬಣಕಾರ ಇಲ್ಲಿ ಕೆಜೆಪಿ ಹುರಿಯಾಳು. ಪಾಲಾಕ್ಷಗೌಡ ಪಾಟೀಲ ಬಿಜೆಪಿಯಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಪಕ್ಷ ಮುಖ್ಯವಲ್ಲ: 1957ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಹಿರೇಕೆರೂರ ವಿಧಾನಸಭಾ ಕಣಕ್ಕೆ ಧುಮುಕಿದ್ದ ಶಂಕರರಾವ್ ಜಿ. ಗುಬ್ಬಿ 1967ರವರೆಗೂ ಜೈತ್ರಯಾತ್ರೆ ಮುಂದುವರಿಸಿದ್ದರು. 1972ರ ಚುನಾವಣೆಯಲ್ಲಿ ಕಾಂಗ್ರೆಸ್ನ ಬಿ.ಜಿ. ಬಣಕಾರ ಆರಿಸಿ ಬಂದಿದ್ದರು. ಆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಗುಬ್ಬಿ ಸೋಲನುಭವಿಸಿದ್ದರು. 1983ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರರಾಗಿ ಕಣಕ್ಕಿಳಿದ ಬಣಕಾರ, ಕಾಂಗ್ರೆಸ್ನ ಅಭ್ಯರ್ಥಿ ಗುಬ್ಬಿ ಮತ್ತೆ ಗೆದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ ಬಿ.ಜಿ. ಬಣಕಾರ ಗೆಲುವಿನ ನಗೆ ಬೀರಿದರು. 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯು.ಬಿ. ಬಣಕಾರ ಗೆದ್ದು, ಮೊದಲ ಬಾರಿಗೆ ಕಮಲದ ಬಾವುಟ ಹಾರಿಸಿದರು. 1999ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಎಚ್. ಬನ್ನಿಕೋಡ ಅವರಿಗೆ ಒಲಿದ ಈ ಕ್ಷೇತ್ರ, 2004ರಲ್ಲಿ ಜೆಡಿಎಸ್ನಿಂದ ಹಾಗೂ 2008ರಲ್ಲಿ ಕಾಂಗ್ರೆಸ್ನಿಂದ ಬಿ.ಸಿ. ಪಾಟೀಲರನ್ನು ಆರಿಸಿ ಕಳುಹಿಸಿತು.
ಗುಟ್ಟು ಬಿಡದ ಮತದಾರ: ಹಿಂದಿನ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪಕ್ಷಕ್ಕಿಂತ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ ಅಭ್ಯರ್ಥಿಗೇ ಕ್ಷೇತ್ರದ ಜನತೆ ಮಣೆಹಾಕಿದ್ದು ಸ್ಪಷ್ಟವಾಗುತ್ತದೆ. ಬಿಎಸ್ವೈ ಸುಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಿ.ಎಂ. ಉದಾಸಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದುಕೊಟ್ಟಿದ್ದು ಕೆಜೆಪಿ ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಬಿಜೆಪಿ ಸರ್ಕಾರ ಅನುದಾನ ಹಂಚಿಕೆಯಲ್ಲಿ ಅನುಸರಿಸಿರುವ ತಾರತಮ್ಯ ನೀತಿ ನಡುವೆಯೂ ತಾವು ಹಿರೇಕೆರೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸಿದ ತೃಪ್ತಿಯಿದೆ. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರಕ್ಕೆ ರು. 600 ಕೋಟಿ ಬಂದಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದ್ದು, 36 ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ತುಂಗಾ ನದಿ ಯೋಜನೆ ಜಾರಿಗೆ ತರಲಾಗಿದೆ. ಪ್ರಾಧಿಕಾರ ರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದ್ದೇವೆ. ಕ್ಷೇತ್ರದಲ್ಲಿ ಹೊಸ ಆರೋಗ್ಯ ಕೇಂದ್ರಗಳು, ಶಾಲಾ-ಕಾಲೇಜು ಆರಂಭಿಸಲು ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರೂ ಸರ್ಕಾರ ಎಳ್ಳಷ್ಟೂ ಕಾಳಜಿ ವಹಿಸಲಿಲ್ಲ. ಮಿನಿ ವಿಧಾನಸೌಧ, ಅಗ್ನಿಶಾಮಕ ದಳ ಸ್ಥಾಪನೆ, ಆಸ್ಪತ್ರೆ ಮೇಲ್ದರ್ಜೆಗೇರಿಕೆ ಮೂಲಕ ಶ್ರೀಸಾಮಾನ್ಯರು ಉತ್ತಮ ಬದುಕು ಸಾಗಿಸಲು ಅನುಕೂಲ ಮಾಡಿಕೊಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ವಿನಿಯೋಗಿಸಿದ್ದು ಸಂತಸ ತಂದಿದೆ. ಪಪೂ-ಪದವಿ ಕಾಲೇಜು, ಮೊರಾರ್ಜಿ ವಸತಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಸಾಧನೆಯೇ ಚುನಾವಣೆಯಲ್ಲಿ ಶ್ರೀರಕ್ಷೆ ಆಗಲಿದೆ.
- ಬಿ.ಸಿ. ಪಾಟೀಲ, ಶಾಸಕ
ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ ದೊಡ್ಡ ಪ್ರಮಾಣದಲ್ಲಿದೆ. ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಶಾಸಕರು ಸಂಪೂರ್ಣ ಎಡವಿದ್ದಾರೆ. ಪಡಿತರ ಚೀಟಿಗಾಗಿ ಜನತೆ ನಿತ್ಯ ಪರದಾಡುತ್ತಿದ್ದಾರೆ. ಕುಡಿಯುವ ನೀರು ಪೂರೈಸಲು ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿದ್ದೇನೋ ನಿಜ. ಆದರೆ, ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೆ ನೀರಿನ ಸಮಸ್ಯೆ ಬಾಧಿಸುತ್ತಿರಲಿಲ್ಲ. ಬಗರ ಹುಕುಂ ಸಾಗುವಳಿಗಾರರ 2000 ಅರ್ಜಿಗಳು ಇತ್ಯರ್ಥ ಕಂಡಿಲ್ಲ. ಮಾಜಿ ಸಿಎಂ ಬಿಎಸ್ವೈ ಆರಂಭಿಸಿದ್ದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಮುಂತಾದ ಜನಪ್ರಿಯ ಯೋಜನೆಗಳೂ ಸ್ಥಗಿತಗೊಂಡಿವೆ. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಶಾಸಕರೇ ಸಾರ್ವಜನಿಕರಿಗೆ ಲಭ್ಯರಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಉಸ್ತುವಾರಿ ಸಚಿವರಾಗಿದ್ದ ಸಿ.ಎಂ. ಉದಾಸಿ ಅನುದಾನದ ಹೊಳೆಯನ್ನೇ ಹರಿಸಿದ್ದಾರೆ. ಸರ್ಕಾರದ ಸಾಧನೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್ಗೆ ಮತದಾರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾನೆ.
- ಯು.ಬಿ. ಬಣಕಾರ, ಕೆಜೆಪಿ ಅಭ್ಯರ್ಥಿ
-ಬಿ.ಕೆ. ಮಹೇಂದ್ರ