ಉದಾಸಿ ವರ್ಚಸ್ಸಿನ ಮುಂದೆ ಪಕ್ಷ ಗೌಣ
ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಾನಗಲ್ 1957ರಿಂದ 2004ರ ವರೆಗೆ ಒಮ್ಮೆಯೂ ಬಿಜೆಪಿಗೆ ಮಣೆ ಹಾಕಿರಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಕ್ಷೇತ್ರದಿಂದ 2008ರಲ್ಲಿ ಕಣಕ್ಕಿಳಿದ ಸಿ.ಎಂ. ಉದಾಸಿ ಪ್ರಥಮ ಬಾರಿಗೆ ಕಮಲ ಅರಳಿಸಿದ ಕೀರ್ತಿಗೆ ಭಾಜನರಾಗಿದ್ದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಮತದಾರರು, ಪಕ್ಷಕ್ಕಿಂತ ಸಚ್ಚಾರಿತ್ರ್ಯ ಹೊಂದಿರುವ ಅಭ್ಯರ್ಥಿಯೇ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 1957ರಿಂದ 2004ರ ವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್, ಪಕ್ಷೇತರ, ಜನತಾ ಪಕ್ಷ ಹಾಗೂ ಜನತಾದಳ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದ ಮತದಾರ, ಬಿಜೆಪಿಗೆ ಪ್ರತಿ ಬಾರಿಯೂ ಸೋಲಿನ ರುಚಿ ತೋರಿಸುತ್ತಲೇ ಬಂದಿದ್ದ. ಈ ಎಲ್ಲ ಸೂಕ್ಷ್ಮ ಅರಿತ ಬಿಜೆಪಿ 2008ರಲ್ಲಿ ಸಿ.ಎಂ. ಉದಾಸಿ ಅವರನ್ನು ಕಣಕ್ಕಿಳಿಸಿ ಮ್ಯಾಜಿಕ್ ಮಾಡಿತು.
ಮತದಾರನ ತೀರ್ಪು: 1957ರ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಬಿ.ಆರ್. ಪಾಟೀಲ ಗೆಲುವು ಸಾಧಿಸಿದ್ದರೆ, 1962ರ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದ. 1962ರಲ್ಲಿ ಮತ್ತೆ ಬಿ.ಆರ್. ಪಾಟೀಲರಿಗೆ ಮಣೆ ಹಾಕಿದ. ಅವರ ನಿಧನದ ಬಳಿಕ 1968ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಜಿ.ಎನ್. ದೇಸಾಯಿ ಅವರನ್ನು ಆಯ್ಕೆ ಮಾಡಿ, ಅನುಕಂಪದ ಅಲೆ ತಮ್ಮ ಬಳಿ ನಡೆಯುವುದಿಲ್ಲ ಎಂದು ಕ್ಷೇತ್ರದ ಜನತೆ ಸಾಬೀತು ಮಾಡಿದರು. ಕಾಂಗ್ರೆಸ್ ವಿಜಯಯಾತ್ರೆ ಎರಡು ಅವಧಿಗೆ ಮುಂದುವರಿಯಿತು. 1972ರಲ್ಲಿ ಕಾಂಗ್ರೆಸ್ನ ಪಿ.ಸಿ. ಶೆಟ್ಟರ್ ಹಾಗೂ 1978ರಲ್ಲಿ ಎಂ.ಎಚ್. ತಹಸೀಲ್ದಾರ ಶಾಸಕರಾಗಿ ಆಯ್ಕೆಯಾದರು.
ವೈಯಕ್ತಿಕ ವರ್ಚಸ್ಸು: ಇಲ್ಲಿಯವರೆಗೂ ಕ್ಷೇತ್ರದಲ್ಲಿ ತೆರೆಮರೆಯಲ್ಲಿ ಸಾಮಾಜಿಕ ಕಾರ್ಯ ನಿರ್ವಹಿಸಿ, ಶ್ರೀಸಾಮಾನ್ಯನ ಮೆಚ್ಚುಗೆಗೆ ಪಾತ್ರರಾಗಿದ್ದ ಸಿ.ಎಂ. ಉದಾಸಿ, 1983ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದರೆ, 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ವಿಜಯಿಯಾಗಿದ್ದರು. 1994ರಲ್ಲಿ ಜನತಾದಳದ ಮೂಲಕ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ತಮ್ಮ ಛಾಪು ಎಂಥದು ಎಂಬುದನ್ನು ತೋರಿಸಿದರು. 2004ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. 2008ರಲ್ಲಿ ಬಿಎಸ್ವೈ ಗರಡಿಯಲ್ಲಿ ಗುರುತಿಸಿಕೊಂಡು ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉದಾಸಿ ಅವರನ್ನು ಮತದಾರ ಮತ್ತೆ ಗೆಲ್ಲಿಸುವ ಮೂಲಕ ತಮಗೆ ಪಕ್ಷ ಮುಖ್ಯವಲ್ಲ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವವರು ಯಾವುದೇ ಪಕ್ಷದವರಾದರೂ ಸರಿ ಎಂದು ಸಂದೇಶ ರವಾನಿಸಿದರು.
ಕಾಂಗ್ರೆಸ್ ಮೌನ: ಮಾಜಿ ಸಚಿವ ಸಿ.ಎಂ. ಉದಾಸಿ, ಪ್ರಸಕ್ತ ಚುನಾವಣೆಯಲ್ಲಿ ಬಿಎಸ್ವೈ ನೇತೃತ್ವದ ಕೆಜೆಪಿಯಿಂದ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಅವರನ್ನು ಶತಾಯಗತಾಯ ಸೋಲಿಸಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿದೆ. ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಯ ಹೆಸರು ಆಖೈರಾಗಿಲ್ಲ. ಇದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನೋಹರ ತಹಸೀಲ್ದಾರ ಹಾಗೂ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ. ಈ ಬಾರಿಯೂ ಉದಾಸಿ ತಮ್ಮ ಸಚ್ಚಾರಿತ್ರ್ಯ ಹಾಗೂ ವ್ಯಕ್ತಿತ್ವದ ಮೂಲಕ ಪ್ರಭಾವ ಬೀರುವರೇ ಎಂಬುದನ್ನು ಕಾದು ನೋಡಬೇಕಿದೆ.
-ಬಿ.ಕೆ. ಮಹೇಂದ್ರ