ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರಿಸರ ಪ್ರಜ್ಞೆ ಶಿಕ್ಷಕರ ಶ್ರಮ ಅಪಾರ: ಎಸ್.ಬಿ. ಕೊಡ್ಲಿ

Vishwanath S
Updated On : 9 Apr 2013, 10:49 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 8
ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಪರಿಸರ ರಕ್ಷಣೆಯ ಪ್ರಜ್ಞೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು. ಇಂತಹ ಅವಿರತ ಪ್ರಯತ್ನದೊಂದಿಗೆ ಶಾಲಾ ಆವರಣವನ್ನೇ ಸಸ್ಯಕಾಶಿ ಮಾಡಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಪಡೆಯುವಲ್ಲಿ ಸಾಧನೆಗೈದ ಶಿಕ್ಷಕ ಜಗದೀಶ ಗೂಳಿ ಎಲ್ಲ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ಹಾವೇರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಹೇಳಿದರು.
ಹಾನಗಲ್ಲ ತಾಲೂಕಿನ ಗಡೆಗುಂಡಿಯಲ್ಲಾಪುರ ಕಿರಿಯ ಪ್ರಾಥಮಿಕ ಶಾಲೆಯ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕ ಜಗದೀಶ ಗೂಳಿ ಅವರನ್ನು ಎಲ್ಲ ಪಾಲಕ, ಪೋಷಕರೊಂದಿಗೆ ಗೌರವಿಸಿ ಮಾತನಾಡಿದರು.
ಶಾಲಾ ಆವರಣದ ಒಳ ಹಾಗೂ ಹೊರಗೋಡೆಗಳ ಮೇಲೆ ಬರೆದಿರುವ ನೀತಿ ಬೋಧಕ ನುಡಿಮುತ್ತುಗಳು, ಕಾಂಪೋಸ್ಟ ಗುಂಡಿ ಸ್ವಚ್ಛ ಮತ್ತು ನೈರ್ಮಲ್ಯದ ಶೌಚಾಲಯ, ಕಲಿಕೋಪಕರಣಗಳ ಸಂಗ್ರಹ, ದಾನಿಗಳಿಂದ ನಿರ್ಮಿಸಿದ ಧ್ವಜಸ್ತಂಭ, ಅಡುಗೆ ಕೋಣೆಯ ಸುರಕ್ಷತೆ, ಸ್ವಚ್ಛ, ಶುಚಿರುಚಿ ಅಡುಗೆ ಮುಂತಾದ ಅಂಶಗಳನ್ನು ಪರಿಶೀಲಿಸಿ, ಶಿಕ್ಷಕರನ್ನು ಪ್ರಶಂಸಿದರು.
ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಹಿರಿಯರು, ತಾಯಂದಿರು ಶಿಕ್ಷಕರೊಂದಿಗೆ ಕೈಜೋಡಿಸಿ ಮಾಡಿರುವ ಈ ಕಾರ್ಯ ಜಿಲ್ಲಾ ಮಟ್ಟ ಅಷ್ಟೇ ಅಲ್ಲದೇ ವಲಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗೂ ಅರ್ಹ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ.ಡಿ. ಭಜಂತ್ರಿ, ಮಾರ್ಗದರ್ಶಿ ಶಿಕ್ಷಕ ಗೂರನಗೌಡ ಪಿ, ಗ್ರಾಮದ ಹಿರಿಯರಾದ ಬಸನಗೌಡ ಪಾಟೀಲ, ಸುಭಾಷ ಅರಳೇಶ್ವರ, ಮುದ್ದಪ್ಪ ಬಾಣದ, ಎಸ್‌ಡಿಎಂಸಿ ಅದ್ಯಕ್ಷ ಎಸ್.ಬಿ. ಬಂಕಾಪುರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗ ಆದೇಶಿಸಿದಂತೆ ಎಲ್ಲ ಕುಟುಂಬದ ಮುಖ್ಯಸ್ಥರನ್ನು ಸೇರಿಸಿ ಮತದಾನದ ಜಾಗೃತಿಗಾಗಿ ಪ್ರತಿಜ್ಞಾವಿಧಿ ಕಾರ್ಯವನ್ನು ಬಿಆರ್‌ಸಿ ಸಂಪನ್ಮೂಲ ವ್ಯಕ್ತಿ ಅಶೋಕ ಹನುಮಾಪುರ ನಡೆಸಿಕೊಟ್ಟರು. ಕೊನೆಯಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕ ಜಗದೀಶ ಗೂಳಿ ವಂದಿಸಿದರು. ಇದೇ ವೇದಿಕೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement