ಶೈಕ್ಷಣಿಕ ಅವಕಾಶ ಬಾಚಿಕೊಳ್ಳಲು ಕರೆ
ಹಾವೇರಿ: ಗ್ರಾಮಾಂತರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕವಾಗಿ ಹೆಚ್ಚು ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂದು ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಮಾಜಿ ಸದಸ್ಯ ಎಂ.ಸಿ. ಕೊಳ್ಳಿ ತಿಳಿಸಿದರು. ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ 21 ದಿನಗಳ ಸಿಇಟಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಬೇಕಾದರೆ ಮೂಲ ಶಿಕ್ಷಣದ ಜತೆಗೆ ತಾಂತ್ರಿಕ ಶಿಕ್ಷಣದ ಆವಶ್ಯಕತೆ ಇದ್ದು, ಈ ತರಬೇತಿ ಶಿಬಿರದ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು. 13 ವರ್ಷಗಳಿಂದ ಕಾಲೇಜಿನಲ್ಲಿ ಈ ಶಿಬಿರ ಆಯೋಜಿಸುತ್ತಿದ್ದು, ಪ್ರತಿ ವರ್ಷ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪದವಿ ಪ್ರಾಚಾರ್ಯ ಡಾ.ಬಿ.ಸಿ. ಬನ್ನೂರ ಮಾತನಾಡಿ ಸಿಇಟಿ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಸಿಇಟಿ ರ್ಯಾಂಕ್ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಸಲುವಾಗಿ ಸಮರೋಪಾದಿಯಲ್ಲಿ ಅಧ್ಯಯನ ಮಾಡಿ, ಭದ್ರ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಾತಿ ಲಕ್ಷ್ಮೇಶ್ವರ ಪ್ರಾರ್ಥಿಸಿದರು. ಪದವಿಪೂರ್ವ ಪ್ರಾಚಾರ್ಯ ಡಾ.ಸಿ. ಮಲ್ಲಣ್ಣ ಸ್ವಾಗತಿಸಿದರು. ಪ್ರೊ.ಜಿ.ವಿ. ಸಾಲಿಮಠ ನಿರೂಪಿಸಿದರು. ಪ್ರೊ.ಯು.ಜಿ. ಪಟಗಾರ ವಂದಿಸಿದರು. ಶಿಬಿರದಲ್ಲಿ ಪ್ರೊ.ಎಸ್.ಎನ್. ತಿಪ್ಪನಗೌಡ್ರ, ಡಾ.ಜೆ.ಎಫ್. ಹೊಸಮನಿ, ಪ್ರೊ.ಉಮೇಶ ಕ್ಷೌರದ, ಪ್ರೊ.ಜೆ.ಆರ್. ಶಿಂಧೆ, ಪ್ರೊ.ಎಂ.ಎಸ್. ಬೆಂಡಿಗೇರಿ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಭಾಗವಹಿಸಿದ್ದರು.