ಬಸ್-ಲಾರಿ ಡಿಕ್ಕಿ 15 ಜನರಿಗೆ ಗಾಯ
ಹಾವೇರಿ: ನಿಂತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ 15 ಜನ ಗಾಯಗೊಂಡ ಘಟನೆ ಶಿಗ್ಗಾಂವಿ ತಾಲೂಕಿನ ಮಡ್ಲಿ ಕ್ರಾಸ್ ಬಳಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ.
ರಸ್ತೆ ಬದಿ ನಿಂತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ (ಕೆಎ 25, ಎಫ್ 2885)ಗೆ ಹಿಂದಿನಿಂದ ಬಂದ ಲಾರಿ (ಕೆಎ 16, ಎ 5070) ಡಿಕ್ಕಿ ಹೊಡೆದಿದ್ದರಿಂದ ಈ ಅಪಫಾತ ಸಂಭವಿಸಿದೆ. ಅಪಘಾತದಲ್ಲಿ ಹು-ಧಾ ಮಹಾನಗರ ಪಾಲಿಕೆ ಮಾಜಿ ಮೇಯರ್ ರಾಧಾಬಾಯಿ ಸಫಾರೆ ಸಹಿತ 15 ಜನರು ಗಂಭೀರ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ಗಂಭೀರ ಏಟು ಬಿದ್ದಿರುವ ಸಫಾರೆ ಅವರನ್ನು ಕಿಮ್ಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಬಾಲಾಜಿ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಂಗಳೂರಿನಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಹುಬ್ಬಳ್ಳಿಗೆ ವಾಪಸ್ ಆಗುತ್ತಿದ್ದ ವೇಳೆ ಬೆಳಗಿನ ಜಾವ ಮೂರು ಗಂಟೆಗೆ ಮಡ್ಲಿ ಕ್ರಾಸ್ ಬಳಿ ವಾಯು ವಿಹಾರಕ್ಕಾಗಿ ಬಸ್ ನಿಲ್ಲಿಸಲಾಗಿತ್ತು. ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬಸ್ ಪಲ್ಟಿಯಾಗಿದೆ. ಈ ವೇಳೆ ರಾಧಾಬಾಯಿ ಸಫಾರೆ, ಪ್ರೇಮಾ ಹಬೀಬ, ಲಕ್ಷ್ಮಿ ಚಲವಾದಿ, ಶೋಭಾ ಬಂಡಿವಡ್ಡರ, ಶಾರದಾಬಾಯಿ ಪೂಜಾರಿ, ನಾಗಪ್ಪ ಇಟ್ನಾಳ ಸಹಿತ 15 ಜನ ಗಾಯಗೊಂಡಿದ್ದಾರೆ. ಈ ಕುರಿತಂತೆ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.