ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಏ. 10
ತಾಲೂಕಿನಲ್ಲಿ ಕೆಜೆಪಿಗೆ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುತ್ತಿರುವುದನ್ನು ಸಹಿಸದ ಕಾಂಗ್ರೆಸ್ ಮುಖಂಡರು ನನ್ನ ಮೇಲೆ ಜಾತಿ ಗಲಭೆ ಮಾಡಿಸುತ್ತಿದ್ದಾರೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ಸರಿಯಾದ ದಾಖಲೆಯೊಂದಿಗೆ ಮಸಿದಿಗೆ ಬಂದು ಅವರ ಹೇಳಿಕೆಯನ್ನು ಸಾಬೀತು ಮಾಡಿದರೆ ತಾವು ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಗೆಲವು ಖಚಿತ: ತಾಲೂಕಿನ ಕೆಲ ರಾಜಕಾರಣಿಗಳ ಕುತಂತ್ರದ ಪರಿಣಾಮ 14 ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದ್ದರೂ ಜನಪರ ಹೋರಾಟಗಳಿಂದ ದೂರವಾಗಿಲ್ಲ. ಇದರಿಂದ ಎಲ್ಲ ಸಮುದಾಯಗಳ ಜನತೆ ಈ ಬಾರಿ ನನ್ನನ್ನು ಬೆಂಬಲಿಸುತ್ತಿದ್ದು, ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಅಧಿಕಾರಕ್ಕೆ ಬಂದರೆ ಹಳ್ಳಿಗಳಿಗೆ ಶಾಶ್ವತ ಕುಡಿಯವ ನೀರು, ರಸ್ತೆ ಹಾಗೂ ದೊಡ್ಡ ಕೆರೆಗಳಿಗೆ ನೀರು ತುಂಬಿಸಿ ನೀರಾವರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದರು. ತಾಪಂ ಉಪಾಧ್ಯಕ್ಷೆ ರೂಪಾ ಆಡೂರು, ತಾಲೂಕು ಕೆಜೆಪಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಫೀರ್ ರಾಣಿಬೆನ್ನೂರು, ಕುರುಬ ಸಮಾಜದ ಮುಖಂಡ ಹುಚ್ಚಪ್ಪ ಜಡಿಯಣ್ಣನವರ, ಪಕ್ಷೇತರನಾಗಿ ಆಯ್ಕೆಯಾಗಿದ್ದ ಪಪಂ ಸದಸ್ಯ ಮುಜೀಬ್ ರಿಕಾರ್ಟಿ ಮಾತನಾಡಿದರು.
ಸೇರ್ಪಡೆ: ಆಸೀಫ್ಖಾನ್ ಸೇಖ್ಸನದಿ, ನಸುರುಲ್ಲಾ ಕಲೆಗಾರ, ಹಬೀಬಖಾನ್ ಸೇತಸನದಿ, ಬಾಬುಸಾಬ್ ಕುಂದಗೋಳ, ಅಮಾನುಲ್ಲಾ ತಿಳವಳ್ಳಿ, ಮಂಜುನಾಥ ಬಿಂಗೇರಿ, ಅಬ್ದುಲ್ ಗಣಿ ಮಕಾಂದಾರ, ನಾಗರಾಜ ಬಿಸ್ಲಳ್ಳಿ, ಮಲ್ಲನಗೌಡ ಪಾಟೀಲ, ರುದ್ರಪ್ಪ ಪೂಜಾರ, ಮಂಜಪ್ಪ ಗುತ್ತೇನವರ, ಮಾಲತೇಶ ಪೂಜಾರ, ಆಂಜನೇಯ ನಾಗಣ್ಣನವರ, ಚಂದ್ರಪ್ಪ ಕೋಡದ, ಹನುಮಂತಪ್ಪ ಹಾಲಮ್ಮನವರ, ದೇವೆಂದ್ರಪ್ಪ ನಾಗಣ್ಣನವರ ಇನ್ನಿತರರು ಕೆಜೆಪಿ ಸೇರ್ಪಡೆಗೊಂಡರು.
ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಗುಬ್ಬಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಪಿ.ಇ. ಪಾಟೀಲ, ಮಂಜುನಾಥ ಶೆಟ್ಟರ, ಮಂಜಪ್ಪ ಕುಲಕರ್ಣಿ, ಕೆಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಾಫರ್ಸಾಬ್ ಖಾಜಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಂಜಪ್ಪ ಗಿಡ್ಡಣ್ಣನವರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಸದಸ್ಯರಾದ ಶಿವಣ್ಣ ಗಡಿಯಣ್ಣನವರ, ಚಂದ್ರು ಅಣ್ಣಪ್ಪನವರ ಇದ್ದರು.