ಪ್ರಾದೇಶಿಕ ಪಕ್ಷದಿಂದ ಅಭಿವೃದ್ಧಿ: ಸಜ್ಜನರ
ಬ್ಯಾಡಗಿ: ಪ್ರಾದೇಶಿಕ ಪಕ್ಷದ ರಚನೆ ಬಿ.ಎಸ್. ಯಡಿಯೂರಪ್ಪ ಅವರಿಗಲ್ಲ, ರಾಜಕೀಯಕ್ಕೇ ಅನಿವಾರ್ಯವಾಗಿದ್ದು, ಕ್ಷೇತ್ರದ ಮತದಾರರು ಕೆಜೆಪಿಯನ್ನು ಬೆಂಬಲಿಸಬೇಕೆಂದು ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿದರು. ಬುಧವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆಜೆಪಿ ಚುನಾವಣಾ ಪ್ರಚಾರ ನಡೆಸಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸುಳ್ಳು ಭರವಸೆಗಳಿಂದ ಜನತೆ ಭ್ರಮನಿರಸನಗೊಂಡಿದ್ದಾರೆ, ಶಾಸಕಾಂಗದಲ್ಲಿ ಹೈಕಮಾಂಡ್ ಸಂಸ್ಕೃತಿ ತೊಲಗಬೇಕಾಗಿದೆ. ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ರೈತ ಹಾಗೂ ಕೂಲಿ ಕಾರ್ಮಿಕರ ಅಭಿವೃದ್ಧಿ ಸಾಧ್ಯವೆಂದರು. ಅಭಿವೃದ್ಧಿಯ ಹರಿಕಾರ ಬಿಎಸ್ವೈ ರಾಜ್ಯದ ಶಕ್ತಿ. ಮುಖ್ಯಮಂತ್ರಿಯಾಗಿದ್ದ ವೇಳೆ 1.50 ಕೋಟಿ ಕುಟುಂಬಗಳಿಗೆ ಸರ್ಕಾರದ ಒಂದಿಲ್ಲೊಂದು ಯೋಜನೆ ತಲುಪಿವೆ. 40 ವರ್ಷಗಳ ಸುದೀರ್ಘ ಹೋರಾಟದ ಮೂಲಕ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದ ಅವರನ್ನು ಸ್ವಾರ್ಥ ರಾಜಕಾರಣಿಗಳು ಕುತಂತ್ರದಿಂದ ಕೆಳಗಿಳಿಸಿದ್ದಾರೆ. ಬಿಜೆಪಿಯ ನಿಜ ಬಂಡವಾಳ ಈ ಚುನಾವಣೆಯಲ್ಲಿ ಹೊರಬೀಳುತ್ತದೆ ಎಂದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತಾವು ಶ್ರಮಿಸುವುದಾಗಿ ಸಜ್ಜನರ ಹೇಳಿದರು. ಮಾಜಿ ಶಾಸಕ, ಕೆಜೆಪಿ ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, ಬಿಎಸ್ವೈ ಸಹಕಾರದಲ್ಲಿ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಅಭಿವೃದ್ಧಿ ಮೂಲಕ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿವರಾಜ ಸಜ್ಜನರನ್ನು ಗೆಲ್ಲಿಸಿ ಯಡಿಯೂರಪ್ಪ ಕೈ ಬಲಪಡಿಸಿ ಎಂದು ಕರೆ ನೀಡಿದರು. ಮುರಿಗೆಪ್ಪ ಶೆಟ್ಟರ, ಗಂಗಣ್ಣ ಎಲಿ, ಜಿಪಂ ಸದಸ್ಯ ಶಿವಕುಮಾರ ಮುದ್ದಪ್ಪಳವರ, ಗುಡ್ಡಪ್ಪ ದೇಸಾಯಿ, ಮಂಜಣ್ಣ ಲಿಂಗದಹಳ್ಳಿ ಮತ್ತಿತರರು ಇದ್ದರು.