ಬಿಜೆಪಿಯಿಂದ ಗರಿಷ್ಠ ಅಭಿವೃದ್ಧಿ: ಬಳ್ಳಾರಿ
ಬ್ಯಾಡಗಿ: ಹಿಂದಿನ ಯಾವ ಸರ್ಕಾರವೂ ಮಾಡದಿರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ಕೇವಲ ಐದು ವರ್ಷಗಳಲ್ಲಿ ಮಾಡಿ ತೋರಿಸಿದೆ ಎಂದು ಪಕ್ಷದ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಪಕ್ಷದ ಸ್ಥಳೀಯ ಕಾರ್ಯಾಲಯದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅನೇಕ ಜನಪರ ಕಾರ್ಯಕ್ರಮ ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸುವರ್ಣ ಗ್ರಾಮ ಹಾಗೂ ಸ್ವಚ್ಛ ಗ್ರಾಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ತಾಲೂಕು ಬಿಜೆಪಿ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅಲೆಯಿದೆ. ಬಳ್ಳಾರಿ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾಗರಾಜ ಮಾಳಗಿ, ಈಶ್ವರ, ದ್ಯಾಮಪ್ಪ ಬಾರ್ಕಿ, ಚೌಡಪ್ಪ ಪೂಜಾರ ಮತ್ತಿತರರು ಬಿಜೆಪಿ ಸೇರಿದರು. ರಾಮಣ್ಣ ಉಕ್ಕುಂದ, ಕೆ.ಎನ್. ಚಿನವಾಲಗಟ್ಟಿ, ಬಿ.ಬಿ. ಬಂಗೇರ, ಮಲ್ಲಿಕಾರ್ಜುನ ದೊಡ್ಮನಿ, ಶಂಕ್ರಣ್ಣ ಅಕ್ಕಿ ಇದ್ದರು.