ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮತದಾನಕ್ಕೆ ಪ್ರತಿಯೊಬ್ಬರೂ ಶ್ರಮಿಸಿ

Vishwanath S
Updated On : 10 Apr 2013, 10:50 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 10
ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳೆರಡು ಮತದಾನ ಹೆಚ್ಚಿಸುವುದಕ್ಕಾಗಿ ಜಾರಿಗೆ ತಂದಿರುವ ಸ್ವಿಫ್ ಕಾರ್ಯಕ್ರಮ ಯಶಸ್ವಿಗೊಳಿಸುವುದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಮತದಾರ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಸಿ. ಹೊಳೆಹೊಸೂರು ತಿಳಿಸಿದರು.
ಇಲ್ಲಿನ ನಗರಸಭೆಯ ಗುಡ್ಡದ ಸ್ಮಾರಕ ಸಭಾ ಭವನದಲ್ಲಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಮತದಾನ ಜಾಗೃತಿಗಾಗಿ ಏರ್ಪಡಿಸಿದ್ದ ತರಬೇತಿ ಸಭೆಯಲ್ಲಿ ಮಾತನಾಡಿದರು.
ಮತದಾನ ದೇಶದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿರುತ್ತದೆ. ಇತ್ತಿಚಿನ ದಿನಗಳಲ್ಲಿ ದೇಶದ ಅದೆಷ್ಟೊ ಜನರು ಮತದಾನ ಮಾಡದಿರುವುದು ಹಾಗೂ ಮತದಾನ ಮಾಡಲು ಮಹಿಳೆಯರು ಮತಗಟ್ಟಿಗಳಿಗೆ ಬಾರದಿರುವುದನ್ನು ಗಮನಿಸಿರುವ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಸಮಿಕ್ಷೆ ನಡೆಸಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಾಮಾನ್ಯವಾಗಿ ಒಂದು ಪಕ್ಷಕ್ಕೆ ಅಥವಾ ಪಕ್ಷದ ಕಾರ್ಯಕರ್ತರ ಬೆಂಬಲಿಗರೆಂದು ಗುರುತಿಸಿಕೊಂಡಿರುವುದು ಸಾಮಾನ್ಯ ಸಂಗತಿಯಾಗಿದ್ದು, ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾವುದಾದರೂ ಒಬ್ಬರಿಗೆ ತಮ್ಮ ಮತ ನೀಡುವುದರೊಂದಿಗೆ ತಮಗಿರುವ ಮಹತ್ವದ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ಸಾರ್ವಜನಿಕರು, ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಸಿ.ಸಿ. ಹೊಳೆಹೊಸೂರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಚುನಾವಣಾಧಿಕಾರಿ ಶಿವಕುಮಾರ ಮಾತನಾಡಿ, ಮತದಾನ ಹೆಚ್ಚಿಸುವುದಕ್ಕಾಗಿ ತಮಗೆ ನೀಡಿರುವ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಲು ಸರ್ವರು ಮುಂದಾಗಬೇಕೆಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್. ಪ್ರಭಾಕರ, ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಎಂ.ಎಚ್. ಪಾಟೀಲ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುನಂದಾ ಐಯ್ಯನಗೌಡ್ರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದ್ದ ತಾಲೂಕು ಸಿಡಿಪಿಓ ಕಚೇರಿಯನ್ನು ಬನಶಂಕರಿ ನಗರದ ಪಾರ್ಕ್ ಪಕ್ಕದಲ್ಲಿರುವ ಸ್ತ್ರೀ ಶಕ್ತಿ ಭವನಕ್ಕೆ ಸ್ಥಳಾಂತರಿಸಿದ್ದು, ಮತದಾರರನ್ನು ಜಾಗೃತಿಗೊಳಿಸುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಮಗೆ ನೀಡಿರುವ ಸಮಗ್ರ ಮಾಹಿತಿ ಪಡೆಯುವುದಕ್ಕಾಗಿ ಕಚೇರಿ ಅವಧಿಯಲ್ಲಿ ಹೆಚ್ಚಿನ ಮಾಹಿತಿ ಪಡೆಯಲು, ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆಗಮಿಸಬೇಕೆಂದು ತಿಳಿಸಿದರು. ಕ್ಷೇತ್ರ ಕಾರ್ಯಕರ್ತೆಯರಾದ ಜ್ಯೋತಿ ಶಿಗ್ಲಿ, ಲತಾ ಜ್ಯೋತಿ, ಪ್ರತಿಭಾ ಕುಲಕರ್ಣಿ, ಜಯಶ್ರೀ ತಳವಾರ, ಗೀತಾ ರಡ್ಡೇರ, ವಿಜಯಾ ಕುದರಿ, ಮಂಜುಳಾ ಹೂಬಣ್ಣನವರ, ಸುನಿತಾ ದೊಡ್ಮನಿ, ಅನಸೂಯಾ ಕಂಬಳಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement