ಮೂರು ಜೋಡಿ ಬಾಲ್ಯ ವಿವಾಹಕ್ಕೆ ತಡೆ
ಹಾನಗಲ್ಲ: ಅಪ್ರಾಪ್ತ ವಯಸ್ಸಿನ ಮೂವರು ಬಾಲಕಿಯರ ವಿವಾಹ ನಡೆಸುತ್ತಿದ್ದ ತಾಲೂಕಿನ ಗೇರುಗುಡ್ಡ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣಕ್ಕೆ ಸಕಾಲಿಕ ಭೇಟಿ ನೀಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಶೆಟ್ಟರ ನೇತೃತ್ವದ ತಂಡ ಬಾಲ್ಯ ವಿವಾಹವನ್ನು ಮಂಗಳವಾರ ತಡೆಗಟ್ಟಿದರು.
ತಾಲೂಕಿನ ಗೇರುಗುಡ್ಡ ಬಸಾಪುರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯ ವಿವಾಹ ಘಟನೆ ಬೆಳಕಿಗೆ ಬಂದಿದ್ದು, ಇಲ್ಲಿ ನಡೆಯುತ್ತಿದ್ದ 11 ಮದುವೆಗಳಲ್ಲಿ 8 ಜೋಡಿಗಳನ್ನು ಹೊರತುಪಡಿಸಿ ಮೂರು ಜೋಡಿಗಳು ಅಪ್ರಾಪ್ತ ವಯಸ್ಸಿನವರೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳ ತಂಡ ದಾಖಲಾತಿಗಳ ಪರಿಶೀಲನೆಗೆ ಮುಂದಾಯಿತು. ಆದರೆ, ಸಂಘಟಕರು ನೂತನ ವಧು-ವರರ ಯಾವುದೇ ದಾಖಲೆಗಳನ್ನು ಪಡೆಯದೇ ಇರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದು ಕೊನೆಗೆ ಕೇವಲ 8 ಜೋಡಿಗಳ ವಿವಾಹಕ್ಕೆ ಅನುಮತಿ ನೀಡಲಾಯಿತು. ಆದಾಗ್ಯೂ ಎಲ್ಲ ಜೋಡಿಗಳ ವಯಸ್ಸಿನ ದಾಖಲಾತಿಗಳನ್ನು ತಹಸೀಲ್ದಾರ್ಗೆ ಪರಿಶೀಲನೆಗೆ ಸಲ್ಲಿಸುವಂತೆ ಸಂಘಟಕರಿಗೆ ಸೂಚಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಶೆಟ್ಟರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜಿ. ಪರಮೇಶಪ್ಪ, ಕಂದಾಯ ಇಲಾಖೆ ನಿರೀಕ್ಷಕ ಶ್ಯಾನಬಾಳ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ರಾಜಶೇಖರ ಉಪಸ್ಥಿತರಿದ್ದರು.
16ರಂದು ಜಾತ್ರೋತ್ಸವ
ಸವಣೂರು: ತಾಲೂಕಿನ ಅಲಿಪುರ ಗ್ರಾಮದ ಶ್ರೀ ದಂಡಿನ ದುರ್ಗಾದೇವಿ ಹಾಗೂ ಶ್ರೀ ಹಿರೇಕೇರಿ ದುರ್ಗಾದೇವಿ ಜಾತ್ರಾ ಮಹೋತ್ಸವ ಏ. 16ರಂದು ನೆರವೇರಲಿದೆ. ಏ. 16ರಂದು ಬೆಳಗ್ಗೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ ವೈಭವಗಳೊಂದಿಗೆ ಕೈಗೊಳ್ಳಲಾಗುತ್ತದೆ.