ಅಧಿಕಾರಕ್ಕೆ ಬಂದರೆ ರೈತರಿಗೆ ಸಕಲ ಸೌಲಭ್ಯ
ಹಾವೇರಿ: ಕರ್ನಾಟಕ ಜನತಾ ಪಕ್ಷ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 65 ವರ್ಷದ ರೈತ ತನ್ನ ಇಳಿ ವಯಸ್ಸಿನಲ್ಲಿ ಯಾರ ಹಂಗು ಇಲ್ಲದೇ ಬದುಕು ಸಾಗಿಸುವಂತೆ ಮಾಸಿಕ ರು. 500 ಮಾಸಾಶನ ನೀಡುವುದು ಸೇರಿದಂತೆ ಮತ್ತಿತರ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ಶುಕ್ರವಾರ ಮಧ್ಯಾಹ್ನ ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಹಾಗೂ ಪಕ್ಷಕ್ಕೆ ನೂತನವಾಗಿ ಸೇರ್ಪಡೆಗೊಂಡ ವಿವಿಧ ಪಕ್ಷಗಳ ಸದಸ್ಯರನ್ನು ಬರಮಾಡಿಕೊಂಡು ಮಾತನಾಡಿದರು.
65 ವರ್ಷ ದಾಟಿದ ರೈತ ಆರ್ಥಿಕ ಸಬಲತೆ ಸಾಧಿಸುವ ಮೂಲಕ ಇಳಿ ವಯಸ್ಸಿನಲ್ಲಿಯೂ ಯಾರ ಹಂಗವಿಲ್ಲದೇ ಬದುಕುವಂತಾಗಬೇಕು. ತಾವು ಸಿಎಂ ಆಗಿದ್ದ ಸಂದರ್ಭದಲ್ಲಿ ರೈತರ ಪರ ಅನೇಕ ಯೋಜನೆಗಳನ್ನು
ಜಾರಿಗೆ ತಂದ ತೃಪ್ತಿಯಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಆದ್ದರಿಂದ ಮೇ 5ರಂದು ನಡೆಯಲಿರುವ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುವಂತೆ ಮತದಾರ ಪ್ರಭುಗಳು ಆರ್ಶೀವಾದ ಮಾಡಬೇಕು ಎಂದು ವಿನಂತಿಸಿದರು.
ಪ್ರಣಾಳಿಕೆ ಅಂಶಗಳಿವು: ಏ. 13ರಂದು ಕೆಜೆಪಿ ಪಕ್ಷದ ಚುನಾವಣಾ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದೆಂದ ಅವರು, ಪ್ರಣಾಳಿಕೆಯಲ್ಲಿ ರೈತ ಪರ ಯೋಜನೆಗಳು ಮಾತ್ರವಲ್ಲದೇ, ಸಹಕಾರಿ ಬ್ಯಾಂಕ್ಗಳಿಂದ ಒಂದು ರು. ಲಕ್ಷವರೆಗೆ ಸಾಲ ಪಡೆದಿರುವ ರೈತರ ಸಾಲವನ್ನು ತಾವು ಸಿಎಂ ಆಗಿದ್ದ ಸಂದರ್ಭ ಮನ್ನಾ ಮಾಡಿದ್ದೇವೆ. ಇನ್ನೂ ಕೆಲ ರೈತರ ಸಾಲ ಮನ್ನಾ ಮಾಡಲಾಗಿಲ್ಲ. ಅಂತಹ ಎಲ್ಲ ರೈತರ ಸಾಲವನ್ನು ಮನ್ನಾ ಮಾಡಲಾವುದು. ಇದಕ್ಕಾಗಿ ರು. 600-700 ಕೋಟಿ ಬೇಕಾಗುತ್ತದೆ ಎಂದರು.
ರೈತ ಮಕ್ಕಳು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ರು. 2,500 ಕೋಟಿ ವಿಶೇಷ ಅನುದಾನ ಕಾಯ್ದಿರಿಸುವ ಮೂಲಕ ರೈತರ ಮಕ್ಕಳು ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಕ್ರಮಕೈಗೊಳ್ಳಲಾಗುವುದು.
ನಂಜುಂಡಪ್ಪ ವರದಿ ಅನುಷ್ಠಾನ: ರಾಜ್ಯದ 224 ತಾಲೂಕುಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸಲು ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು. ಸ್ವಾತಂತ್ರ್ಯ ಸಿಕ್ಕು 6 ದಶಕಗಳೇ ಸಂದಿದ್ದರೂ ಈವರೆಗೂ ರಾಜ್ಯದ ಅನೇಕ ತಾಲೂಕುಗಳ ಮೂಲಸೌಕರ್ಯದಿಂದ ವಂಚಿತವಾಗಿ ಎಂದು ಯಡಿಯೂರಪ್ಪ ವಿಷಾದಿಸಿದರು. ಈ ಎಲ್ಲ ಯೋಜನೆಗಳಲ್ಲದೇ ಇನ್ನೂ ಅನೇಕ ಜನಪರ ಯೋಜನೆಗಳನ್ನು ಜಾರಿ ತರುವ ಭರವಸೆಯ ಚುನಾವಣಾ ಪ್ರಣಾಳಿಕೆಯನ್ನು ಏ. 13ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗುವುದೆಂದರು.
ದಿಕ್ಸೂಚಿ: ಹಾವೇರಿ ಜಿಲ್ಲೆ ರಾಜ್ಯದ ರಾಜಕೀಯಕ್ಕೆ ಹೊರ ದಿಕ್ಸೂಚಿ ನೀಡಿದೆ. ಡಿ. 9ರಂದು ಈ ನೆಲೆದಲ್ಲೇ ಮಾಜಿ ಸಚಿವ ಸಿ.ಎಂ. ಉದಾಸಿ ಹಾಗೂ ಮಾಜಿ ಶಾಸಕ ನೆಹರು ಓಲೇಕಾರ ಮತ್ತಿತರ ನೇತೃತ್ವದಲ್ಲಿ ಕೆಜೆಪಿ ಹುಟ್ಟಿಕೊಂಡಿದೆ. ನಾಲ್ಕು ತಿಂಗಳ ಕೂಸುವಾಗಿದ್ದರೂ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ರಾಜ್ಯದ ನಾನಾ ಮೂಲೆಗಳಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಸಾರ್ ಕಾಂಗ್ರೆಸ್ ತೊರೆದು ಜನತೆ ಕೆಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಟೀಕಾಕಾರರಿಗೆ ತಕ್ಕಪಾಠ ಕಲಿಸಿ: ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಅಭ್ಯರ್ಥಿ ಸಿ.ಎಂ. ಉದಾಸಿ, 1 ನಿಮಿಷದ ಮತದಾನದಿಂದ 5 ವರ್ಷದ ಭವಿಷ್ಯ ಬರೆಯುವ ಸುವರ್ಣ ಅವಕಾಶ ಮತದಾರರಿಗೆ ಸಿಕ್ಕಿದೆ. ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ನೆಲೆ ಕಂಡಿಲ್ಲ ಎಂಬ ಅಪಪ್ರಚಾರ ಮಾಡಿದ ಟೀಕಾಕಾರರಿಗೆ ತಕ್ಕಪಾಠ ಕಲಿಸಲು ಮತದಾರರು ಸಿದ್ಧರಾಗಬೇಕು ಎಂದರು.
ಮಾಜಿ ಸಚಿವ ಜಬ್ಬಾರಖಾನ್ ಹೊನ್ನಳ್ಳಿ, ರೈತ ಮುಖಂಡ ಈಶ್ವರಚಂದ್ರ ಹೊಸಮನಿ ಇತರ ಮುಖಂಡರು ಮಾತನಾಡಿ, ಕೆಜೆಪಿ ಚಿಹ್ನೆ ಟೆಂಗಿನಕಾಯಿ ಆಗಿದೆ. ಈ ಗುರುತಿಗೆ ಮತ ನೀಡುವ ಮೂಲಕ ಬಿಎಸ್ವೈ ಅವರ ಕೈ ಬಲಪಡಿಸುವಂತೆ ವಿನಂತಿಸಿಕೊಂಡರು.
ಸೇರ್ಪಡೆ: ಇರ್ಫಾನ್ ಪಠಾಣ, ಎಸ್. ಮಂಜುಳಾ, ಸೋಮಾ ನಾಯ್ಕ, ವಿವಿಧ ಪಕ್ಷದ ಅನೇಕ ಮುಖಂಡರು ಬಿಎಸ್ವೈ ನೇತೃತ್ವದಲ್ಲಿ ಕೆಜೆಪಿ ಸೇರಿದರು.
ಇಂದು ಕೆಜೆಪಿ ಪ್ರಣಾಳಿಕೆ
ಹಾವೇರಿ: ರೈತರ, ಅಲ್ಪಸಂಖ್ಯಾತರ, ದೀನ ದಲಿತ ಅಭ್ಯುದಯದ ಸೂತ್ರಗಳನ್ನೊಳಗೊಂಡ ಚುನಾವಣೆ ಪ್ರಣಾಳಿಕೆಯನ್ನು ಏ. 13ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು. ಕೆಜೆಪಿ ಅಧಿಕಾರಕ್ಕೆ ಬಂದರೆ 65 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳು ರು. 500 ಮಾಶಾಸನ ನೀಡಲಾಗುವುದು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ರು. 2 ಸಾವಿರ ಕೋಟಿ ಕಾಯ್ದಿರಿಸುವುದು, ಮಹಿಳೆಯರು ಆರ್ಥಿಕವಾಗಿ ಸಬಲತೆ ಸಾಧಿಸಲು ಪ್ರತ್ಯೇಕ ಸಹಕಾರಿ ಬ್ಯಾಂಕ್ ಸ್ಥಾಪಿಸಿ ರು. 2500 ಕೋಟಿ ಮೀಸಲು. ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ರು. 2000 ಕೋಟಿ ಕಾಯ್ದಿರಿಸಲಾಗುವುದು. ಇದಲ್ಲದೆ, ಇನ್ನೂ ಅನೇಕ ಜನೋಪಯೋಗಿ ಯೋಜನೆಗಳುಳ್ಳ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದಾಗಿ ಬಿಎಸ್ವೈ ತಿಳಿಸಿದರು.