ನಿಂದನೆ: ನೆಹರುವಿರುದ್ಧ ದೂರು
ಹಾವೇರಿ: ಪಟ್ಟಣದ ನಾಗೇಂದ್ರಮಟ್ಟಿಯಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದ ಕೆಜೆಪಿ ಕಾರ್ಯಕರ್ತೆಯನ್ನು ತಡೆದ ಕಾಂಗ್ರೆಸ್ ಮುಖಂಡನೊಬ್ಬನನ್ನು ನಿಂದಿಸಿದ ಆರೋಪದ ಮೇರೆಗೆ ಕೆಜೆಪಿ ಅಭ್ಯರ್ಥಿ ನೆಹರು ಓಲೆಕಾರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹಾವೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ, ತಮ್ಮ ಪಕ್ಷದ ಪರವಾಗಿ ಮತ ಚಲಾಯಿಸಿದರೆ ರು. 1 ಲಕ್ಷದ ವರೆಗೆ ಸಾಲ ಕೊಡಿಸಲಾಗುವುದು. ಇದಕ್ಕೆ ರು. 25 ಸಾವಿರ ಸಬ್ಸಿಡಿ ದೊರಕುತ್ತದೆ ಎಂದು ಹೇಳುತ್ತ ಕೆಜೆಪಿ ಪರವಾಗಿ ಮಹಿಳಾ ಕಾರ್ಯಕರ್ತರೊಬ್ಬರು ಪ್ರಚಾರ ನಡೆಸುತ್ತಿದ್ದರು ಎಂದರು. ಈ ಸುದ್ದಿಯ ಜಾಡು ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿದಾಗ, ಕೆಜೆಪಿ ಕಾರ್ಯಕರ್ತೆ ಮತದಾರರಿಂದ ಮತದಾನದ ಗುರುತಿನ ಚೀಟಿ ಹಾಗೂ ರೇಶನ್ ಕಾರ್ಡ್ ಪಡೆದುಕೊಂಡಿರುವುದು ತಿಳಿದು ಬಂದಿತು. ಇದನ್ನು ಆಕ್ಷೇಪಿಸಿದ್ದಕ್ಕೆ ಕೆಜೆಪಿ ಅಭ್ಯರ್ಥಿ ಓಲೇಕಾರ ಸ್ಥಳಕ್ಕೆ ಆಗಮಿಸಿ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹಿರೇಮಠ ಅವರನ್ನು ನಿಂದಿಸಿದ್ದರು ಎಂದು ಲಮಾಣಿ ದೂರಿದರು. ಕೆಜೆಪಿ ಪಕ್ಷದ ಕಾರ್ಯಕರ್ತೆ ಹಾಗೂ ಅಭ್ಯರ್ಥಿ ವಿರುದ್ಧ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದರು. ಎಂ.ಎಂ. ಹಿರೇಮಠ, ಗಾಜೇಗೌಡ್ರು, ಕೋಟೇಶಪ್ಪ ಬಸಗಣಿ, ಜಗದೀಶ ಬೆಂಡಿಗೇರಿ ಇದ್ದರು.