ಸುಭದ್ರ ಸರ್ಕಾರಕ್ಕಾಗಿ ಕೈ ಬೆಂಬಲಿಸಿ
ಬ್ಯಾಡಗಿ: ಸ್ಥಿರ, ಸುಭದ್ರ ಸರ್ಕಾರಕ್ಕಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಶಿವಣ್ಣನವರ ಮನವಿ ಮಾಡಿದರು.
ಮಂಗಳವಾರ ಕಾಗಿನೆಲೆಯಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, 60 ವರ್ಷಗಳಿಂದ ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಾ ಬಂದಿರುವ ಕಾಂಗ್ರೆಸ್ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಶೀಲ ರಾಷ್ಟ್ರವಾಗಿ ಭಾರತ ಗುರುತಿಸಿಕೊಳ್ಳುವಂತೆ ಮಾಡಿದೆ. ರಾಜ್ಯದಲ್ಲಿ ಐದು ವರ್ಷಗಳಿಂದ ಆಳುತ್ತಿರುವ ಬಿಜೆಪಿಯ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ. ಆ ಪಕ್ಷದ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಮಾಜಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ರು. 700 ಕೋಟಿ ಅಭಿವೃದ್ಧಿ ಕಾಮಗಾರಿ ಆಗಿದ್ದೇ ನಿಜವಾದರೆ ಬಿಜೆಪಿ ತೊರೆದಿದ್ದೇಕೆ? ಕೆಜೆಪಿ ಜತೆ ಗುರುತಿಸಿಕೊಂಡು ಬಿಜೆಪಿಗೆ ದ್ರೋಹ ಬಗೆದಿದ್ದೇಕೆ ಎಂದು ಪ್ರಶ್ನಿಸಿದರು. ಈ ಭಾಗದ ರೈತರ ಜೀವನಾಡಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಪ್ರಾರಂಭವಾಗಿ 10 ವರ್ಷಗಳಾದರೂ ರೈತರ ಭೂಮಿಗೆ ನೀರುಣಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿಈ ಯೋಜನೆ ಕಾರ್ಯಗತ ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಸ್.ಆರ್. ಪಾಟೀಲ ಪ್ರತ್ಯಕ್ಷ: ತಮಗೆ ಟಿಕೆಟ್ ನೀಡದಿರುವ ಬಗ್ಗೆ ಸೋಮವಾರ ಅಭಿಮಾನಿಗಳ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಎಸ್.ಆರ್. ಪಾಟೀಲ ಈ ಪ್ರಚಾರ ಸಭೆಯಲ್ಲಿ ದಿಢೀರ್ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸಿದರು.
ಕಾಂಗ್ರೆಸ್ ಮುಖಂಡ, ನ್ಯಾಯವಾದಿ ಬಿ.ಎಂ. ಗೌರಾಪುರ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಬಸವರಾಜ ಶಿವಣ್ಣನವರ ಸೋತಿದ್ದಾರೆ. ಈ ಬಾರಿ ಬಹುಮತದೊಂದಿಗೆ ಗೆಲ್ಲಿಸಿ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ನೀಡುವಂತೆ ಕೋರಿದರು.
ಬ್ಯಾಡಗಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹುಸೇನಸಾಬ ದೊಡ್ಮನಿ, ಕಾಗಿನೆಲೆ ಹೋಬಳಿ ಅಧ್ಯಕ್ಷ ಸುರೇಶಗೌಡ ಪಾಟೀಲ, ಮುಖಂಡರಾದ ಎಸ್.ಸಿ. ಶಿಡೇನೂರ, ಲಿಂಗಪ್ಪ ಕೊಂಬಳಿ, ಹನುಮಗೌಡ ಪಾಟೀಲ, ರುದ್ರಪ್ಪ ಹೊಂಕಣ, ನಿಸಾರಅಹ್ಮದ್ ಹಾವನೂರ, ಕರಬಸಪ್ಪ ವಾರದ, ಅಬ್ದುಲ್ ಲತೀಫ್ ಶಮನಾ ಭಾಯಿ, ರಮೇಶ ಸುತ್ತಕೋಟಿ, ಹುಚ್ಚಯ್ಯ ಹಮ್ಮಿಗಿಮಠ, ಸುರೇಶ ಮೆಣಸಿನಹಾಳ, ಕೊಟ್ರಯ್ಯ ಮಠದ ಇದ್ದರು.