ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆಮಿಷ, ಒತ್ತಡಕ್ಕೊಳಗಾಗದೆ ಮತ ಚಲಾಯಿಸಿ

Vishwanath S
Updated On : 14 Apr 2013, 12:11 pm

ಹಾವೇರಿ: ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೆ ಪ್ರತಿಯೊಬ್ಬರೂ ನಿರ್ಭೀತಿಯಿಂದ ಮತ ಚಲಾಯಿಸಬೇಕೆಂದು ರಾಣಿಬೆನ್ನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಂದಾ ಅಯ್ಯನಗೌಡರ ತಿಳಿಸಿದರು.
ತಾಲೂಕಿನ ಶನಿವಾರ ಚಳಗೇರಿ ಗ್ರಾಮದಲ್ಲಿ ಭಾರತ ಸರ್ಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಧಾರವಾಡ, ಹಾವೇರಿ ವಾರ್ತಾ ಇಲಾಖೆ, ಜಿಲ್ಲಾ ಸ್ವೀಪ್ ಸಮಿತಿ, ರಾಣಿಬೆನ್ನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮತದಾನ ಮಾಡುವ ಮುನ್ನ ಅಭ್ಯರ್ಥಿಗಳ ಬಗ್ಗೆ ತರ್ಕಬದ್ಧವಾಗಿ ಯೋಚಿಸಿ, ಯೋಗ್ಯ ವ್ಯಕ್ತಿಯನ್ನು ಆರಿಸಿ ಕಳಿಸಿ. ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಜನರ ಕೈಯಲ್ಲಿದೆ. ಅದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಆರ್.ಎಚ್. ಬಾರ್ಕಿ ಮಾತನಾಡಿ, ದಾನಗಳಲ್ಲಿ ಮತದಾನ ಶ್ರೇಷ್ಠ. ಪ್ರಸಕ್ತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿ ನಿಷ್ಕಳಂಕ ವ್ಯಕ್ತಿಯನ್ನು ಗೆಲ್ಲಿಸಲು ಪಣತೊಡಬೇಕು. ಅಭ್ಯರ್ಥಿಗಳು ನೀಡುವ ಹಣ ಅಥವಾ ವಸ್ತುಗಳಿಗೆ ಮಾರು ಹೋಗದೆ ಆತ್ಮಸಾಕ್ಷಿಯಿಂದ ಮತದಾನ ಮಾಡಬೇಕೆಂದು ಹೇಳಿದರು.
ಕ್ಷೇತ್ರ ಪ್ರಚಾರ ಸಹಾಯಕ ಸಿ.ಕೆ. ಸುರೇಶ ಪ್ರಾಸ್ತಾವಿಕ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಶಿಗ್ಲಿ ಸ್ವಾಗತಿಸಿದರು.
ತುಮ್ಮಿನಕಟ್ಟಿಯಲ್ಲೂ ಮತದಾನ ಜಾಗೃತಿ
ರಾಣಿಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಗನಬಸವೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪರಮೇಶ್ವರ ನಾಯಕ ಮಾತನಾಡಿ, ಜಾತಿ-ಮತ-ಪಂಥ ನೋಡದೆ ಸಚ್ಚಾರಿತ್ರ್ಯವುಳ್ಳ ವ್ಯಕ್ತಿಗೆ ಮತ ಹಾಕಿ ಎಂದರು.
ನಮಗೆ ಸಂಪೂರ್ಣ ಸ್ವಾತಂತ್ರ್ಯದ ಲಾಭ ಸಿಗಬೇಕಾದರೆ ಉತ್ತಮ ವ್ಯಕ್ತಿಗಳನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕೆಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುನಂದಾ ಅಯ್ಯನಗೌಡರ ಮಾತನಾಡಿ, ಮಹಿಳಾ ಸಬಲೀಕರಣವಾಗಬೇಕಾದರೆ ಮಹಿಳೆಯರು ಕುಟುಂಬದ ಪುರುಷರ ಒತ್ತಡಕ್ಕೆ ಒಳಗಾಗದೆ ಸ್ವಆಲೋಚನೆಯಿಂದ, ಪ್ರಜ್ಞಾಪೂರ್ವಕವಾಗಿ ಮತ ಹಾಕಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ್ತ ಶಿಕ್ಷಕ ನಂದಿಹಳ್ಳಿ ಮಾತನಾಡಿ, ಪ್ರಸ್ತುತ ಮತದಾನ ವ್ಯವಸ್ಥೆಯಲ್ಲಿ ಅಸಹಾಯಕತೆ, ನ್ಯೂನತೆ ಎದ್ದು ಕಾಣುತ್ತಿವೆ. ಅವುಗಳನ್ನು ಹೋಗಲಾಡಿಸಲು ಪ್ರತಿಯೊಬ್ಬ ಪ್ರಜೆ ನಿರ್ಭೀತಿಯಿಂದ ಮತ ಚಲಾಯಿಸಬೇಕೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement