ಮೆಣಸಿನಕಾಯಿ ಘಾಟು ಯಾರಿಗೆ?
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 13
ಮೆಣಸಿನಕಾಯಿ ವ್ಯಾಪಾರಕ್ಕೆ ವಿಶ್ವ ಪ್ರಸಿದ್ಧ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಮತಕ್ಷೇತ್ರ ರಾಜಕೀಯವಾಗಿ ಕ್ಷೇತ್ರದಿಂದ ಹೊರಗಿನವರಿಗೆ ತನ್ನ ಘಾಟನ್ನು ಸೂಸಿದ್ದೇ ಹೆಚ್ಚು. ಕಾಂಗ್ರೆಸ್ ಪ್ರಚಾರಕ್ಕೆಂದು ಬ್ಯಾಡಗಿ ಮಾರುಕಟ್ಟೆಗೆ ಬಂದಿದ್ದ ಈಗಿನ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಭಾಷಣ ಮಾಡುತ್ತಿರುವ ವೇಳೆ ಜರುಗಿದ ಕಲ್ಲು ತೂರಾಟದಲ್ಲಿ ಅವರ 2 ಹಲ್ಲುಗಳನ್ನು ಮುರಿದು ದಾಖಲೆ ನಿರ್ಮಿಸಿದ ಕ್ಷೇತ್ರವಾಗಿದೆ.
ಈವರೆಗೂ ನಡೆದ 11 ಸಾರ್ವತ್ರಿಕ ಚುನಾವಣೆಗಳಲ್ಲಿ ಹೊರಗಿನವರು 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮತಕ್ಷೇತ್ರಕ್ಕೆ ಸಂಬಂಧವಿರದ ಶಿಗ್ಗಾಂವಿ ತಾಲೂಕು ದುಂಡಶಿ ಗ್ರಾಮದ ಡಾ ಎಚ್.ಡಿ. ಲಮಾಣಿ 1983 ಹಾಗೂ 1989ರಲ್ಲಿಯೂ, ಹುಬ್ಬಳ್ಳಿಯ ಕೆ.ಎಸ್. ಬೀಳಗಿ 1985 ಮತ್ತು 1994 ತಲಾ 2 ಬಾರಿ ಅಲ್ಲದೇ ರಾಣಿಬೆನ್ನೂರು ತಾಲೂಕಿನ ಖಂಡೇರಾಯನಹಳ್ಳಿ ಗ್ರಾಮದ ರುದ್ರಪ್ಪ ಲಮಾಣಿ 1999ರಲ್ಲಿ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಹೊರಗಿನವರೆ: ರಾಣಿಬೆನ್ನೂರು ತಾಲೂಕಿನ ಕಾಕೋಳದ ಕೆ.ಎಫ್. ಪಾಟೀಲ 1972ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಇವರೂ ಸಚಿವರಾಗಿದ್ದರು. ಕೆ.ಎಫ್. ಪಾಟೀಲ ಕ್ಷೇತ್ರಕ್ಕೆ ಸಂಬಂಧಿಸಿದ್ದರೂ ಬೇರೆ ತಾಲೂಕಿನವರು. ಇನ್ನುಳಿದಂತೆ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಸಿದ್ದಮ್ಮ ಮೈಲಾರ, ಸಾಹಿತಿ ಮಹದೇವ ಬಣಕಾರ, ಶಿಡೇನೂರಿನ ನೆಹರು ಓಲೇಕಾರ ಪಟ್ಟಣದಿಂದ ಮರಿಯಪ್ಪ ಮಾಳಗಿ, ಸುರೇಶಗೌಡ ಪಾಟೀಲ ತಲಾ ಒಂದು ಬಾರಿ ಶಾಸಕರಾಗಿದ್ದಾರೆ.
3 ತಾಲೂಕು 1 ಕ್ಷೇತ್ರ: ರಾಣಿಬೆನ್ನೂರು ತಾಲೂಕಿನ 25, ಹಾವೇರಿಯ 26, ಬ್ಯಾಡಗಿ ತಾಲೂಕಿನ 66 ಸೇರಿದಂತೆ ಒಟ್ಟು 117 ಗ್ರಾಮಗಳು ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. 91,847 ಪುರುಷರು, 83,054 ಮಹಿಳೆಯರು ಸೇರಿ ಒಟ್ಟು 1,74,901 ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
ಕಾಂಗ್ರೆಸ್ಗೆ 6 ಬಾರಿ ಗೆಲವು: ಈವರೆಗೂ ನಡೆದ 11 ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕಾಂಗ್ರೆಸ್ನ್ನು 6 ಬಾರಿ ಗೆಲ್ಲಿಸಿದ್ದಾರೆ. ಇನ್ನುಳಿದಂತೆ 2 ಬಾರಿ ಬಿಜೆಪಿ, ಜನತಾಪಕ್ಷ, ಜನತಾದಳ, ಪೀಪಲ್ಸ್ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್ಪಿ) ತಲಾ ಒಂದು ಬಾರಿ ಕ್ಷೇತ್ರದಲ್ಲಿ ಜಯ ಗಳಿಸಿವೆ.
ಪರಿಶಿಷ್ಟರಿಗೆ ಮೀಸಲು: ಬ್ಯಾಡಗಿ ಮತಕ್ಷೇತ್ರವು 1978ರಿಂದ 2008ರ ವರೆಗೆ ಪರಿಶಿಷ್ಟ ಜಾತಿಗೆ ಮೀಸಲು ನಿಗದಿಯಾಗಿತ್ತು. ಈ ಅವಧಿಯಲ್ಲಿ ಜರುಗಿದ 7 ಸಾರ್ವತ್ರಿಕ ಚುನಾವಣೆಗಳಲ್ಲಿ 4 ಬಾರಿ ಕಾಂಗ್ರೆಸ್ ಜನತಾಪಕ್ಷ, ಜನತಾ ದಳ, ಹಾಗೂ ಬಿಜೆಪಿ ತಲಾ ಒಂದು ಬಾರಿ ಗೆಲವು ಸಾಧಿಸಿವೆ.
ಮೊದಲ ಶಾಸಕ: ಕ್ಷೇತ್ರ ವಿಂಗಡಣೆಗೂ ಮುನ್ನ ಪರಿಶಿಷ್ಟರಿಗೆ ಮೀಸಲಿದ್ದ ಬ್ಯಾಡಗಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಇದರಿಂದ ವ್ಯಾಪಾರಸ್ಥರೊಬ್ಬರು ಶಾಸಕರಾಗುವ ಅವಕಾಶ ದೊರೆಯಿತು. ಕಳೆದ 2008ರ ಚುನಾವಣೆಯಲ್ಲಿ ಇಬ್ಬರು ವರ್ತಕರು ರೇಸ್ನಲ್ಲಿದ್ದರು. ಆದರೆ, ಕಾಂಗ್ರೆಸ್ನಿಂದ ಆಯ್ಕೆ ಬಯಸಿದ್ದ ಎಸ್.ಆರ್. ಪಾಟೀಲರಿಗೆ ಟಿಕೆಟ್ ಸಿಗಲಿಲ್ಲ. ಇನ್ನು ಬಿಜೆಪಿಯಿಂದ ಕಣಕ್ಕಿಳಿದಿದ್ದ ಸುರೇಶಗೌಡ ಪಾಟೀಲ ಶಾಸಕರಾಗಿ ಆಯ್ಕೆಯಾದ ಮೊದಲ ವರ್ತಕ.
ಸ್ಪರ್ಧೆಯಿಂದ ಹಿಂದಕ್ಕೆ: ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಅವರಿಗೆ ನಿಷ್ಠೆ ತೋರಿಸಿ ಅವಧಿಗೂ ಮುನ್ನ ರಾಜಿನಾಮೆ ಸಲ್ಲಿಸಿದ ಸುರೇಶಗೌಡ ಕೆಜೆಪಿಗೆ ಸೇರ್ಪಡೆಯಾದರು. ಅದೇ ಪಕ್ಷದಿಂದ ಸ್ಪರ್ಧಿಸುವ ಅವಕಾಶವಿದ್ದರೂ ವೈಯಕ್ತಿಕ ಕಾರಣವೊಡ್ಡಿ ಕಣದಿಂದ ಹಿಂದೆ ಸರಿದಿರುವ ಸುರೇಶಗೌಡರು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ.
ತ್ರಿಕೋನ ಸ್ಪರ್ಧೆ: ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಕೆಜೆಪಿ ನಡುವೆ ಬಹುತೇಕ ತ್ರಿಕೋನ ಸ್ಪರ್ಧೆ ನಡೆಯಲಿದೆ. ಬಿಜೆಪಿಯಿಂದ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ನಿಂದ ಬಸವರಾಜ ಶಿವಣ್ಣನವರ ಅಥವಾ ಎಸ್.ಆರ್. ಪಾಟೀಲ, ಕೆಜೆಪಿಯಿಂದ ಶಿವರಾಜ ಸಜ್ಜನರ, ಬಿಎಸ್ಸಾರ್ನಿಂದ ದಾದಾಪೀರ ಭೂಶಿ ಕಣಕ್ಕಿಳಿಯಲಿದ್ದಾರೆ. ಇನ್ನೂ ಜೆಡಿಎಸ್ನಿಂದ ಮಲ್ಲಿಕಾರ್ಜುನ ಬೇವಿನಮರದ, ಮೋಹನ ಬಿನ್ನಾಳ ಅಥವಾ ವನಿತಾ ಗುತ್ತಲ ಇವರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಯಿದೆ.
ಪ್ರಾದೇಶಿಕ ಪಕ್ಷ ಅನಿವಾರ್ಯ
ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆಯಿದೆ. ಮತದಾರ ಈ ಬಾರಿ ಕೆಜೆಪಿ ಬೆಂಬಲಿಸಲಿದ್ದಾರೆ. ಬಿಎಸ್ವೈ ಸಾಧನೆ ಮುಂದೊಡ್ಡಿ ಚುನಾವಣಾ ಪ್ರಚಾರ ನಡೆಸಲಾಗುವುದು. ತಮ್ಮ 24 ವರ್ಷ ರಾಜಕೀಯ ಅನುಭವದಲ್ಲಿ 7 ಚುನಾವಣೆಗಳಲ್ಲಿ ಜಯ ಸಾಧಿಸಿದ್ದೇನೆ. ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹೀಗಾಗಿ ನನ್ನ ಗೆಲುವಿನ ಹಾದಿ ಸುಗಮ.
- ಶಿವರಾಜ ಸಜ್ಜನರ, ಕೆಜೆಪಿ ಅಭ್ಯರ್ಥಿ
ಗೆಲುವು ನಿಶ್ಚಿತ
ಸ್ವಾರ್ಥಕ್ಕಾಗಿ ಜನಿಸಿರುವ ಕೆಜೆಪಿ ಕೇವಲ 5 ತಿಂಗಳು ಹಸುಗೂಸು. ನಿರ್ದಿಷ್ಟ ಕಾರ್ಯಕ್ರಮ ಹಾಗೂ ಬದ್ಧತೆಯಿಲ್ಲದೇ ಹುಟ್ಟಿಕೊಂಡಿರುವ ಪಕ್ಷಕ್ಕೆ ಜನ ಬೆಂಬಲ ಸಿಗಲು ಸಾಧ್ಯವಿಲ್ಲ. 5 ವರ್ಷಗಳಲ್ಲಿ ಬಿಜೆಪಿ ಮಾಡಿದ ಜನಪರ ಕಾರ್ಯಕ್ರಮ ನನ್ನ ಗೆಲವಿಗೆ ಶ್ರೀರಕ್ಷೆ. ಬಿಜೆಪಿ ಚಿಹ್ನೆ ಬಳಸಿಕೊಂಡು ನಾಯಕರಾಗಿ ಇದೀಗ ಮೋಸ ಮಾಡಲು ಮುಂದಾಗಿರುವ ನಾಯಕರಿಗೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲವು ನಿಶ್ಚಿತ.
- ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ಅಭ್ಯರ್ಥಿ
ಕಾಂಗ್ರೆಸ್ ಗೆಲವಿನ ಓಟ
ಕಾಂಗ್ರೆಸ್ನ ಗೆಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಅಧಿಕಾರಕ್ಕೆ ತಂದ ಮತದಾರರು ಪಶ್ಚಾತಾಪ ಪಡುತ್ತಿದ್ದಾರೆ. ಮತದಾರರಿಗೆ ತಪ್ಪಿನ ಅರಿವಾಗಿದ್ದು, ಕೈಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ರಾಜ್ಯದ ಬೊಕ್ಕಸ ಲೂಟಿ ಮಾಡಿದ್ದೆ ಬಿಜೆಪಿ ಸಾಧನೆ. ಸ್ವಚ್ಛ, ಸುಭದ್ರ ಹಾಗೂ ಅಭಿವೃದ್ಧಿ ಪರ ಸರ್ಕಾರಕ್ಕಾಗಿ ಕಾಂಗ್ರೆಸ್ನ್ನು ಮತದಾರರು ಬೆಂಬಲಿಸುತ್ತಾರೆ.
- ಬಸವರಾಜ ಶಿವಣ್ಣನವರ,ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ
-ಶಿವಾನಂದ ಮಲ್ಲನಗೌಡರ