ಸರ್ವಾಂಗೀಣ ಅಭಿವೃದ್ಧಿಗೆ ಕೆಜೆಪಿ ಬೆಂಬಲಿಸಿ
ಹಿರೇಕೆರೂರು: ಕಳೆದ ಚುನಾವಣೆಯಲ್ಲಿ ಯು.ಬಿ. ಬಣಕಾರ ಅವರಿಗೆ ಅನ್ಯಾಯವಾಗಿದ್ದರೂ ಅವರು ನ್ಯಾಯವಾದಿಯಾಗಿ ಯಾವತ್ತೂ ಜನಸೇವೆಯಿಂದ ದೂರವಾಗಿಲ್ಲ. ಇಂತಹ ಸರಳ, ಸಜ್ಜನಿಕೆ, ಪ್ರಾಮಾಣ ವ್ಯಕ್ತಿಯನ್ನು ಕ್ಷೇತ್ರದ ಮತದಾರರು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೆಜೆಪಿ ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು.
ತಾಲೂಕಿನ ರಟ್ಟೀಹಳ್ಳಿ ಗ್ರಾಮದಲ್ಲಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಪರ ಮತಯಾಚಿಸಿ ಮಾತನಾಡಿದರು.
ಅಭ್ಯರ್ಥಿಯನ್ನು ಬೆಂಬಲಿಸಿ: ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ತತ್ವದಡಿಯಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದೇನೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರುವ ಈ ದಿನಗಳಲ್ಲಿ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆಯನ್ನು ಮನಗಂಡು ಪಕ್ಷವನ್ನು ಸ್ಥಾಪನೆ ಮಾಡಿದ್ದು, ಪಕ್ಷದ ಗುರುತಾದ ತೆಂಗಿನಕಾಯಿಗೆ ಮತ ಹಾಕಿ ಪಕ್ಷದ ಅಭ್ಯರ್ಥ್ಥಿಗಳನ್ನು ಬೆಂಬಲಿಸಬೇಕು ಎಂದರು.
ರೈತರಿಗೆ ಪಿಂಚಣಿ: ಚುನಾವಣೆಗೆ ಈಗಾಗಲೇ ದೇಶದಲ್ಲಿಯೇ ಮಾದರಿಯಾದ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದ್ದು, 50 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಪಕ್ಷವು ಅಧಿಕಾರಕ್ಕೆ ಬಂದರೆ ರೈತರಿಗೆ ಪಿಂಚಣಿ, ಪ್ರತೇಕ ಮಹಿಳಾ ಸಹಕಾರಿ ಬ್ಯಾಂಕ್, ರೈತರ ಸಾಲಮನ್ನಾ, ನೀರಾವರಿಗೆ ಮೊದಲ ಆಧ್ಯತೆ ನೀಡಲಾಗುವುದು. ಡಾ. ನಂಜುಂಡಪ್ಪ ವರದಿಯ ಸಂಪೂರ್ಣ ಅನುಷ್ಠಾನ, ರೈತರ ಮಕ್ಕಳ ಉನ್ನತ ಶಿಕ್ಷಣದ ಖರ್ಚು, ವೆಚ್ಚಗಳನ್ನು ಭರಿಸುವುದು. ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಕಳೆದ 60 ವರ್ಷಗಳಿಂದ ಕೇವಲ ಮತಬ್ಯಾಂಕ್ ಮಾಡಿಕೊಂಡು ವಂಚಿಸಿದೆ. ಈ ಬಗ್ಗೆ ಜಾಗೃತರಾಗಿರುವ ಮುಸ್ಲಿಮರು ಕೆಜೆಪಿ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಅವರು ಕಳೆದ ಬಾರಿ ಪಕ್ಷೇತರರಾಗಿ ಸ್ಫರ್ಧಿಸಿ ಅಲ್ಪಮತಗಳ ಅಂತದಿಂದ ಸೋಲೋಪ್ಪಿಕೊಂಡಿದ್ದರೂ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಾಲೂಕಿನ ಶೇ. 92ರಷ್ಟು ಅಭಿವೃದ್ಧಿ ಕಾರ್ಯಗಳು ಅವರ ಮನವಿಯಂತಯೇ ನಿರ್ವಹಿಸಲಾಗಿದೆ. ಅದರ ಶ್ರೇಯಸ್ಸು ಯು.ಬಿ. ಬಣಕಾರ ಅವರಿಗೆ ಸಲ್ಲುತ್ತದೆ. ಕಳೆದ 10 ವರ್ಷಗಳಿಂದ ತಾಲೂಕಿನ ಜನತೆ ಅನುಭವಿಸಿದ ಯಾತನೆ ಕೊನೆಗೊಳ್ಳುವ ಕಾಲ ಸನ್ನಿತವಾಗಿದೆ. ಮತದಾರರು ಈ ಚುನಾವಣೆಯಲ್ಲಿ ಬಣಕಾರ ಅವರನ್ನು ಬೆಂಬಲಿಸಿ ಎಂದರು.
ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿದರು.
ಸೇರ್ಪಡೆ: ಪಪಂ ಸದಸ್ಯ ಮುಜೀಬ್ ಬಿಕಾರ್ಟಿ, ರಟ್ಟೀಹಳ್ಳಿ ಗ್ರಾಪಂ ಸದಸ್ಯರಾದ ಎಸ್.ಬಿ. ಪಾಟೀಲ, ರಿಯಾಜ್ ಮುಲ್ಲಾ, ಸಿ.ಆರ್. ಜಾಡರ, ಮಾಜಿ ಸದಸ್ಯ ಜಟ್ಟೆಪ್ಪ ಮಾಳಗೊಂಡ್ರ, ಆಲದಗೇರಿ ಮುಖಂಡರಾದ ನಿಜಲಿಂಗಪ್ಪ ಅರಳಿಕಟ್ಟಿ, ಅಜ್ಜಯ್ಯಸ್ವಾಮಿ ಆರಾಧ್ಯಮಠ, ಕೋಡ ಗ್ರಾಪಂ ಸದಸ್ಯ ಚೌಡೆಪ್ಪ ಮಲ್ಲೂರ, ಮಾಜಿ ಅಧ್ಯಕ್ಷ ಸಿದ್ದಪ್ಪ ಕಾಗೇರ, ಹಾಲುಮತ ಸಮಾಜದ ಮುಖಂಡ ಸಿದ್ದಪ್ಪ ಗುಡ್ಡದಪ್ಪನವರ, ಶಿವಯೋಗಿ ಕಂಪ್ಲಿ, ವಕೀಲ ಸಿದ್ದನಗೌಡ ಸಣ್ಣಗೌಡ್ರ ಮೊದಲಾದವರು ಬಿ.ಎಸ್. ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆಜೆಪಿ ಸೇರಿದರು.
ಬಿ.ಜಿ. ಬಣಕಾರ, ಮೈಲಪ್ಪ ಗುಡಗೂರ, ಮಹೇಶ ಗುಬ್ಬಿ, ಬಾವಿ ಬೆಟ್ಟಪ್ಪ, ಗದಿಗೆವ್ವ ಬಿದರಿ, ರೂಪಾ ಆಡೂರ, ಸುಜಾತಾ ಕೊಟಗಿಮನಿ, ಶಾಂತಮ್ಮ ಆನಂದಪ್ಪ ಹಾದಿಮನಿ, ಪಾರ್ವತಿ ಚನ್ನಬಸಪ್ಪ ಭೋಗಾವಿ, ಶಂಕ್ರಗೌಡ ಚನ್ನಗೌಡ್ರ, ಪ್ರಭಾವತಿ ಕುಲಕರ್ಣಿ, ಶಿವಣ್ಣ ಗಡಿಯಣ್ಣನವರ, ಚಂದ್ರು ಅಣ್ಣಪ್ಪನವರ, ಬಸನಗೌಡ ಕಳ್ಳೇರ, ಮಹೇಂದ್ರ ಬಡಳ್ಳಿ, ಲಿಂಗರಾಜ್ ಚಪ್ಪರದಹಳ್ಳಿ ಇದ್ದರು.