ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಧರ್ಮದಿಂದ ಮಾತ್ರ ಸಮಾಜ ತಿದ್ದಲು ಸಾಧ್ಯ

Lingaraj Badiger
Updated On : 15 Apr 2013, 12:21 pm

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 14
ತಪ್ಪು ಹಾದಿ ಹಿಡಿದಿರುವ ಸಮಾಜವನ್ನು ಕಾನೂನುಗಳಿಂದ ನಿಯಂತ್ರಿಸಬಹುದೆ ವಿನಃ ಸುಧಾರಣೆ ತರಲು ಸಾಧ್ಯವಿಲ್ಲ. ಸಮಾಜವನ್ನು ತಿದ್ದುವ ಶಕ್ತಿ ಧರ್ಮಕ್ಕೆ ಮಾತ್ರವಿದೆ ಎಂದು ಗುರುನಂಜೇಶ್ವರ ಶಿವಾಚಾರ್ಯ ಶ್ರೀಗಳು ಪ್ರತಿಪಾದಿಸಿದರು.
ವರದಾ ಹಾಗೂ ಧರ್ಮಾ ನದಿಗಳ ಸಂಗಮ, ತಾಲೂಕಿನ ಕೂಡಲ ಕ್ಷೇತ್ರದ ಶ್ರೀ ಸಂಗಮೇಶ್ವರ ಮಹಾರಥೋತ್ಸವ ಹಾಗೂ ಗುರು ನಂಜೇಶ್ವರ ಶಿವಯೋಗಿಗಳವರ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜೀವನದ ಬಹಿರಂಗ ಸತ್ಯಕ್ಕೆ ಮಾರುಹೋಗಿರುವ ಜನರು ಅಂತರಂಗದ ಸೌಂದರ್ಯ ಮರೆಯುತ್ತಿದ್ದಾರೆ. ಆತ್ಮಶುದ್ಧಿ ಮಾಡಿಕೊಳ್ಳದ ಅವರು ಅನ್ಯಾಯದ ಮಾರ್ಗ ಹಿಡಿದಿದ್ದಾರೆ. ಜೀವಿತದ ಅವಧಿಯಲ್ಲಿ ಮನುಷ್ಯ ಸದ್ವಿಚಾರ ಸದ್ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸಾರ್ಥಕ ಬದುಕು ಸಾಗಿಸುವಂತೆ ಸಲಹೆ ನೀಡಿದರು.
ಹಣ, ಅಂತಸ್ತು, ಅಧಿಕಾರದ ದುರಾಸೆಗಿಳಿದಿರುವ ಮನುಷ್ಯ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾನೆ. ಆಧುನಿಕತೆ ಗುಂಗಿನಲ್ಲಿರುವ ಜನರು ಸನಾತನ ಧರ್ಮ-ಸಂಸ್ಕೃತಿಯಿಂದ ದೂರ ಉಳಿಯುತ್ತಿದ್ದಾರೆ. ಧರ್ಮದ ತಳಹದಿಯಲ್ಲಿ ಬದುಕಿದಾಗ ಮಾತ್ರ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿರಲು ಸಾಧ್ಯ ಎಂದರು.
ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಅಲ್ಪ ಸುಖದ ಬೆನ್ನು ಹತ್ತಿರುವ ಜನರು ತಪ್ಪು ದಾರಿ ತುಳಿಯುತ್ತಿದ್ದಾರೆ. ಆಂತರಿಕ ಬದುಕು ಅರ್ಥ ಮಾಡಿಕೊಂಡಾಗ ಮಾತ್ರ ಬಾಹ್ಯ ಜಗತ್ತಿನ ಸಿಹಿ-ಕಹಿ ಅನುಭವ ಹೊಂದಲು ಸಾಧ್ಯ ಎಂದರು.
ಶರಣರು ತಮ್ಮಲ್ಲಿರುವ ಆದರ್ಶ ಹಾಗೂ ಉದಾತ್ತ ವಿಚಾರಧಾರೆಯನ್ನು ಸಮಾಜಕ್ಕೆ ಎರೆಯುವ ಮೂಲಕ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಧರ್ಮದ ತಳಹದಿಯಲ್ಲಿ ಬದುಕಿದಾಗ ಮಾತ್ರ ಮನುಷ್ಯ ನೆಮ್ಮದಿ, ಶಾಂತಿ ಪಡೆದುಕೊಳ್ಳಲು ಸಾಧ್ಯ. ಆಧ್ಯಾತ್ಮಿಕ ಜ್ಞಾನ ಪಡೆದುಕೊಳ್ಳಲು ಪ್ರತಿಯೊಬ್ಬರಿಗೂ ಶರಣರ ಹಾಗೂ ಮಠಾಧೀಶರ ಮಾರ್ಗದರ್ಶನ ಅವಶ್ಯವಿದೆ. ಹೀಗಾಗಿ ಸ್ವಯಂ ಪ್ರೇರಣೆಯಿಂದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದ ಶ್ರೀ ಗುರು ಮೂಕೇಶ್ವರ ಶಿವಯೋಗಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಮಹಾರಥೋತ್ಸವ: ಸಂಜೆ ಜರುಗಿದ ಮಹಾರಥೋತ್ಸವದಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಅದಕ್ಕೂ ಮುನ್ನ ನೀಲಾಂಬಿಕಾ ಅಮ್ಮನವರಿಗೆ ಮುತ್ತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಗ್ರಾಮದಲ್ಲಿ ಶ್ರೀ ಶಿವಯೋಗಿಗಳವರ ಭಾವಚಿತ್ರ ಮೆರವಣಿಗೆ, ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement