ಶಿಗ್ಗಾಂವಿ ಮಾದರಿ ಕ್ಷೇತ್ರವಾಗಿಸಿದ್ದೇನೆ
ಶಿಗ್ಗಾಂವಿ: ಮತದಾರನ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದ ಶಿಗ್ಗಾಂವಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ ಎಂದರು. ಕ್ಷೇತ್ರದ ಮತದಾರ ನೀಡಿದ ಐದು ವರ್ಷದ ಅಧಿಕಾರವಧಿಯನ್ನು ಜನಕಲ್ಯಾಣಕ್ಕಾಗಿ ಬಳಸಿಕೊಂಡಿದ್ದೇನೆ ಎಂಬ ತೃಪ್ತಿ ತನಗಿದೆ. ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತದಾರನ ಮನದಲ್ಲಿವೆ. ಇವುಗಳೇ ಈ ಬಾರಿ ಚುನಾವಣೆಯಲ್ಲಿ ತಮಗೆ ಗೆಲುವಿನ ಶ್ರೀರಕ್ಷೆಯಾಗಲಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪೊಳ್ಳು ಭರವಸೆ: ಪೊಳ್ಳು ಭರವಸೆಗಳನ್ನು ನೀಡುವ ಮೂಲಕ ಈವರೆಗೂ ಚುನಾವಣೆಗಳನ್ನು ಎದುರಿಸಿರುವ ಕಾಂಗ್ರೆಸ್ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತ ಸಾಗಿದ್ದು, ಆ ಎಲ್ಲ ಆರೋಪಗಳಿಗೆ ತಾವು ಕೈಗೊಂಂಡಿರುವ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿವೆ. ತಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡಲು ಸಾಧ್ಯವಾಗದಿರುವ ಕಾಂಗ್ರೆಸ್ಸಿಗರು ಮತದಾರರ ಮನಸ್ಸಿನಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಸಣ್ಣಪ್ಪ ಬುಳ್ಳಕ್ಕನರ, ಶಂಕರಗೌಡ್ರ ಪಾಟೀಲ, ಎಪಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ, ಡಾ ಬಿ.ಎಚ್. ವೀರಣ್ಣ, ತಾಪಂ ಸದಸ್ಯರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.