ಬಿಎಸ್ವೈಯಿಂದ ಕರ್ನಾಟಕ ಕಲ್ಯಾಣ ಅಸಾಧ್ಯ
ಬ್ಯಾಡಗಿ: ಗೊಬ್ಬರ ಕೇಳಿದ ರೈತರನ್ನು ಗುಂಡಿಕ್ಕಿ ಕೊಂದಿದ್ದಲ್ಲದೇ ಜೈಲಿಗೆ ಹೋದ ರಾಜ್ಯದ ಮೊದಲ ಮುಖ್ಯಮಂತ್ರಿ ಬಿಎಸ್ವೈಯಿಂದ ಕರ್ನಾಟಕ ಕಲ್ಯಾಣವಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ಟೀಕಿಸಿದರು.
ಸೋಮವಾರ ಕಾಂಗ್ರೆಸ್ನಿಂದ ಅಧೀಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ನಲ್ಲಿ ಜಾಮೀನು ಸಿಗದೇ ಜೈಲಿಗೆ ಸೇರಿದ ಬಿಎಸ್ವೈ ಅಧಿಕಾರ ಕಳೆದುಕೊಳ್ಳಬೇಕಾಯಿತು. ಒಗ್ಗಟ್ಟಿನ ಮಂತ್ರ ಜಪಿಸಿದ್ದ ಬಿಜೆಪಿ, ಕೆಜೆಪಿ, ಬಿಎಸ್ಸಾರ್ ಪಕ್ಷಗಳಾಗುವ ಮೂಲಕ ಮನೆಯೊಂದು ಮೂರು ಬಾಗಿಲಿನಂತಾಗಿದೆ ಎಂದು ಲೇವಡಿ ಮಾಡಿದರು.
ಕಳೆದ ಅವಧಿಯಲ್ಲಿ ನಡೆದ ರಾಜಕೀಯ ದೊಂಬರಾಟ ಹಾಗೂ ಭ್ರಷ್ಟ ಶಾಸಕರು ಮಂತ್ರಿಗಳು ನಡೆಸಿದ ದುರಾಡಳಿತದಿಂದ ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಲು ನಿರ್ಧರಿಸಿದ್ದಾರೆ ಎಂದರು.
ಸ್ವಜನ ಪಕ್ಷಪಾತ ಹಾಗೂ ಆಂತರಿಕ ಕಚ್ಚಾಟದಿಂದ ಇಡೀ ರಾಜ್ಯವೇ ತಲೆತಗ್ಗಿಸುಂತಾಗಿದ್ದು, ಈ ಬಾರಿ ಎಲ್ಲ ಪಕ್ಷಗಳನ್ನು ತಿರಸ್ಕರಿಸಿ ಮತದಾರ ಬಾಂಧವರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಕೈಗೊಂಡ ಜನಪ್ರಿಯ ಯೋಜನೆಗಳನ್ನು ಮುಂದಿನ ಸರ್ಕಾರಗಳು ಮುಂದುವರೆಸಿಲ್ಲ ಎಂದು ಆರೋಪಿಸಿದರು.
ಮೆರವಣಿಗೆ: ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ ನಡೆಯಿತು. ಅಗಸನಹಳ್ಳಿಯಿಂದ ಆರಂಭಗೊಂಡ ಮೆರವಣಿಗೆ ಹಳೆ ಪುರಸಭೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಮೆರವಣಿಗೆಯುದ್ದಕ್ಕೂ ಮಾಜಿ ಸಚಿವ ಬಸವರಾಜ ಶಿವಣ್ಣನವರ ತೆರೆದ ವಾಹನದಲ್ಲಿ ಕೈ ಬೀಸಿ ಸಾಗಿದರು.
ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಹುಸೇನಸಾಬ್ ದೊಡ್ಡಮನಿ, ಮಾಜಿ ಜಿಪಂ ಅಧ್ಯಕ್ಷ ಎಸ್.ಸಿ. ಶಿಡೇನೂರ, ತಾಪಂ ಮಾಜಿ ಅಧ್ಯಕ್ಷ ದಾನಪ್ಪ ಚೂರಿ, ಹನುಮಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ, ರುದ್ರಪ್ಪ ಹೊಂಕಣ ಎಪಿಎಂಸಿ ಮಾಜಿ ಅಧ್ಯಕ್ಷ ಹುಚ್ಚನಗೌಡ ಲಿಂಗನಗೌಡ್ರ, ಹುಚ್ಚಯ್ಯ ಹಮ್ಮಿಗಿ, ಚನ್ನಬಸಪ್ಪ ಪೂಜಾರ, ಇತರರು ಪಾಲ್ಗೊಂಡಿದ್ದರು.
--
ಕೆಜೆಪಿಯಿಂದ ಜಿ. ಶಿವಣ್ಣ ನಾಮಪತ್ರ ಸಲ್ಲಿಕೆ
ರಾಣಿಬೆನ್ನೂರು: ಮಾಜಿ ಶಾಸಕ ಹಾಗೂ ಕೆಜೆಪಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಿ. ಶಿವಣ್ಣ ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆಇಬಿ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಹೊರಟ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಾದ ಬಿ.ಎಸ್. ಕೋಡ, ಮೆಡ್ಲೇರಿ ಸರ್ಕಲ್, ಪೋಸ್ಟ್ ಸರ್ಕಲ್, ಎಂ. ಜಿ. ರಸ್ತೆ, ಕುರುಬಗೇರಿ ಕ್ರಾಸ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಮೆರವಣಿಗೆಯಲ್ಲಿ ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ್, ಚೂಳಪ್ಪ ಕಸವಾಳದ, ಮುತ್ತು ಗುದಗೇರ, ಮೆಹಬೂಬ್ ಪಠಾಣ, ಬಸಿರಅಹ್ಮದ್ ಕರ್ಜಗಿ, ಚಂದ್ರಣ್ಣ ತಿಳುವಳ್ಳಿ, ವಿಶ್ವನಾಥ ಪಾಟೀಲ, ಎಸ್.ಎಸ್. ರಾಮಲಿಂಗಣ್ಣನವರ ಸೇರಿದಂತೆ ಅಪಾರ ಬೆಂಬಲಿಗರು ಪಾಲ್ಗೊಂಡಿದ್ದರು.