ಬಿಜೆಪಿ ಮತ್ತೆ ಅಧಿಕಾರಕ್ಕೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 15
ಯುಪಿಎ ಸರ್ಕಾರ ಕೇಂದ್ರದಲ್ಲಿ ನಡೆಸಿದ ದುರಾಡಳಿತದಿಂದ ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ ತಗುಲಿದ್ದು ಜನಪರ ಆಡಳಿತ ನೀಡಿದ ಬಿಜೆಪಿಯನ್ನು ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಸೋಮವಾರ ಬಿಜೆಪಿಯ ಅಧೀಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಯುಪಿಎ ಅಂಗ ಪಕ್ಷಗಳ ಸಮನ್ವಯತೆಯ ಕೊರತೆಯಿಂದ ದೇಶದ ಬಡ ಜನರು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಜನತೆಯ ಶಾಪದಿಂದ ಕಾಂಗ್ರೆಸ್ ರಾಜ್ಯದಲ್ಲಿ ನೆಲ ಕಚ್ಚಲಿದೆ ಎಂದರು.
ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ಅನುದಾನ ನೀಡದೇ ದ್ವೇಷ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್ ವಾಜಪೇಯಿ ಅವರ ಗ್ರಾಮೀಣ ಸಡಕ್ ಹಾಗೂ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸದೇ ತಾರತಮ್ಯವೆಸಗಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗೆ ನೆಹರು ಕುಟುಂಬದ ಸದಸ್ಯರ ಹೆಸರುಗಳನ್ನಿಡುವ ಮೂಲಕ ಸ್ವಜನ ಪಕ್ಷಪಾತ ಆಡಳಿತ ನಡೆಸಿದೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಪ್ರತಿಯೊಂದು ಗ್ರಾಮಕ್ಕೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ವಿಸ್ತಿರಿಸುವ ಮೂಲಕ ಶಾಶ್ವತ ಕುಡಿಯುವ ನೀರು ಒದಗಿಸುವುದಾಗಿ ಭರವಸೆ ನೀಡಿದರು.
ಷಣ್ಮುಖಪ್ಪ ಬಳ್ಳಾರಿ, ತಾಲೂಕು ಬಿಜೆಪಿ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಮುಖಂಡ ಜಯಣ್ಣ ಮಲ್ಲಿಗಾರ, ರಾಮಣ್ಣ ಉಕ್ಕುಂದ, ಚಿಕ್ಕಪ್ಪ ಹಾದಿಮನಿ, ಚನ್ನವೀರಪ್ಪ ಬಳ್ಳಾರಿ, ಶಂಕರಗೌಡ ಪಾಟೀಲ, ಶಂಕ್ರಣ್ಣ ಅಕ್ಕಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಕ್ಕ ಶಿಗ್ಗಾಂವಿ, ವೀರಭದ್ರಗೌಡ ಹೊಮ್ಮರಡಿ, ಮಲ್ಲಿಕಾರ್ಜುನ ದೊಡ್ಡಮನಿ, ಮನೋಹರ ಅರ್ಕಚಾರಿ, ಸೋಮಲಿಂಗಪ್ಪ ಕುಲಕರ್ಣಿ, ಮಹಾರುದ್ರಪ್ಪ ಬೂದಿಹಾಳ, ವೀರೇಂದ್ರ ಶೆಟ್ಟರ ಇದ್ದರು.
ಬೃಹತ್ ಮೆರವಣಿಗೆ: ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪಟ್ಟಣದ ಶ್ರೀ ಚಂದ್ರಗುತ್ತೆಮ್ಮ ದೇವಸ್ಥಾನದಿಂದ ತಹಶೀಲ್ದಾರ ಕಚೇರಿವರೆಗೆ ಬಿಜೆಪಿ ಕಾರ್ಯಕರ್ತರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.