ಬಿಜೆಪಿಯಿಂದ ಬೇಸತ್ತ ಜನ ಕೈ ಹಿಡಿತಾರೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 15
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಮಾಜಿ ಉಪಾಧ್ಯಕ್ಷ ಮನೋಹರ ತಹಸೀಲ್ದಾರ್ ಸೋಮವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಕುಮಾರೇಶ್ವರ ವಿರಕ್ತಮಠದಿಂದ ಎತ್ತಿನ ಚಕ್ಕಡಿಯ ಮೆರವಣಿಗೆಯಲ್ಲಿ ಬೆಂಬಲಿಗ ಕಾರ್ಯಕರ್ತರೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಿ.ವಿ. ಕಂಬಾಳಿಮಠ, ಎಫ್.ಬಿ. ಮಡಿವಾಳರ್, ಆರ್.ಎಸ್. ಪಾಟೀಲ್, ಬಸವರಾಜ ಹೊಸಮನಿ ಇದ್ದರು.
ಬಳಿಕ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮನೋಹರ ತಹಸೀಲ್ದಾರ್ ಮಾತನಾಡಿ, ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಬೇಸತ್ತ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾತುರರಾಗಿದ್ದಾರೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿ, ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಳಿದಿರುವ ಕೆಲವೇ ದಿನಗಳ ಅವಧಿಯಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ, ತಮ್ಮನ್ನು ಆಯ್ಕೆಗೊಳಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು.
ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಮೂರು ಹೋಳಾಗಿ ಶಕ್ತಿಗುಂದಿದೆ. ಅಧಿಕಾರಕ್ಕಾಗಿ ಕಚ್ಚಾಟದಲ್ಲಿ ತೊಡಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಬಿಜೆಪಿಯ ಅಕ್ರಮ, ಹಗರಣಗಳು ಈ ಚುನಾವಣೆಯಲ್ಲಿ ತಿರುಮಂತ್ರವಾಗಲಿವೆ. ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಹಿಂದೆಂದೂ ಯಶಸ್ಸು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷದ ಎದುರಾಳಿಯಾಗಲಿದೆ ಎಂದು ಮನೋಹರ ತಹಸೀಲ್ದಾರ್ ಸ್ಪಷ್ಟಪಡಿಸಿದರು.
ಜಿ.ಟಿ. ಚಂದ್ರಶೇಖರಪ್ಪ, ವೀರಪ್ಪ ಮಡ್ಲೂರ್, ರಾಜಶೇಖರ ಸಾಲಿಮಠ, ಸಿ.ಎಸ್. ಬಡಿಗೇರ್, ಕೆ.ಎಲ್. ದೇಶಪಾಂಡೆ, ಕಾಶೀನಾಥ ನ್ಯಾಮತಿ, ಘನಶ್ಯಾಮ ದೇಶಪಾಂಡೆ, ಜಿ.ಎಸ್. ದೇಶಪಾಂಡೆ, ಯಲ್ಲಪ್ಪ ಕಿತ್ತೂರ, ಎ.ಎಂ. ಪಠಾಣ, ಸೈಯದ್‌ಬಾಷಾ ಪೀರಜಾದೆ, ಏಳುಕೋಟೆಪ್ಪ ಹಾವಳೇರ, ಶಕೀಲ ಅಹ್ಮದ್ ಬಾಳೂರ, ವೀರೇಶ ಬೈಲವಾಳ, ಆರ್.ಸಿ. ಹಿರೇಮಠ, ಎಂ.ಎಂ. ವೆಂಕಟಾಪುರ, ಸಂತೋಷ ಸುಣಗಾರ, ಪಾಪಾಸಾಬ್ ಖೇಣಿ ಇದ್ದರು.