ಮಾಧ್ಯಮದವರಿಗೆ ನಿರ್ಬಂಧ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ. 15
ಮಾಧ್ಯಮಗಳನ್ನು ದೂರವಿಟ್ಟು ಚುನಾವಣೆ ನಡೆಸುತ್ತಿರುವ ಆಯೋಗದ ನೀತಿ ಖಂಡಿಸಿ ಸೋಮವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಹಸೀಲ್ದಾರ್ ಕಚೇರಿ ಎದುರಿಗೆ ಕೆಲಕಾಲ ಪ್ರತಿಭಟನೆ ನಡೆಸಿ, ಬಳಿಕ ಸಹಾಯಕ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಸದಸ್ಯರು, ಚುನಾವಣೆ ಆಯೋಗ ಹಾಗೂ ಸ್ಥಳೀಯ ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿ ಚುನಾವಣಾ ನೀತಿಯನ್ನು ಖಂಡಿಸಿದರು.
ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಮಾತನಾಡಿ, ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ, ಪಾರದರ್ಶಕ ಚುನಾವಣೆ ನಡೆಸುತ್ತಿರುವ ಕ್ರಮ ಸ್ವಾಗತಾರ್ಹ. ಆದರೆ, ಎಲ್ಲದಕ್ಕೂ ಮಾಧ್ಯಮಗಳನ್ನು ಬಳಸಿಕೊಳ್ಳುವ ಚುನಾವಣಾ ಆಯೋಗ ಮಾಧ್ಯಮದವರನ್ನು ನಿಯಂತ್ರಿಸುತ್ತಿರುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನೀತಿ ಸಂಹಿತೆ ಹಾಗೂ ಸದಾಚಾರ ಸಂಹಿತೆ ಹೆಸರಿನಲ್ಲಿ ಮಾಧ್ಯಮಗಳ ವರದಿ ನಿಯಂತ್ರಿಸುವ ಮೂಲಕ ಮಾಧ್ಯಮಗಳಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರಕ್ಕೆ ಚುನಾವಣಾ ಆಯೋಗ ಕೈಹಾಕಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗಕ್ಕೆ ಪ್ರತಿ ಹಂತದಲ್ಲೂ ಅಗತ್ಯ ಸಲಹೆ-ಸೂಚನೆಗಳನ್ನು ನೀಡುತ್ತಿರುವ ಮಾಧ್ಯಮಗಳು ವಸ್ತುನಿಷ್ಠ ವರದಿ ನೀಡಿದರೂ ಆಯೋಗಕ್ಕೆ ಆಗುವ ನಷ್ಟವಾದರೂ ಏನು? ಅಥವಾ ಇಷ್ಟೊಂದು ಬಿಗಿ ಕ್ರಮಗಳನ್ನು ಜರುಗಿಸಲು ಮುಂದಾಗಿರುವ ಆಯೋಗಕ್ಕೆ ಮಾಧ್ಯಮ ಪ್ರತಿನಿಧಿಗಳು ಮಾಡಿರುವ ತಪ್ಪಾದರೂ ಎನು? ಇದನ್ನು ಬಹಿರಂಗಪಡಿಸಿ ಚುನಾವಣೆ ನಡೆಸುವಂತೆ ಆಗ್ರಹಿಸಿದರು.
ನಾಮಪತ್ರ ಸಲ್ಲಿಸುವ ಸುದ್ದಿ ಪ್ರಕಟಿಸಲು ತೆರಳುವ ಮಾಧ್ಯಮದವರಿಗೆ ಪೊಲೀಸ್ ಇಲಾಖೆ ಮುಖಾಂತರ ಇದನ್ನು ತಡೆಯುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ರಕ್ಷಣಾ ಇಲಾಖೆ ಜೊತೆ ಘರ್ಷಣೆ ನಡೆದ ಪ್ರಕರಣಗಳು ನಡೆಯುತ್ತಿವೆ ಎಂದರು.
ಮಾಲತೇಶ ಅರಳೀಮಟ್ಟಿ, ಉಪಾಧ್ಯಕ್ಷ ನಾಗೇಶ ಗುತ್ತಲ, ಕಾರ್ಯದರ್ಶಿ ಮಾರುತಿ ಬಳ್ಳಾರಿ, ಸಹಕಾರ್ಯದರ್ಶಿ ವೀರೇಶ ಚೌಕಿಮಠ, ಖಜಾಂಚಿ ಶಿವಾನಂದ ಮಲ್ಲನಗೌಡ್ರ, ಸದಸ್ಯರಾದ ಪರಮೇಶಪ್ಪ ಅಂಗಡಿ, ಟಿಪ್ಪು ಸುಲ್ತಾನ, ಎಸ್.ಜಿ. ಕರ್ನೂಲ, ರಾಜು ಗುತ್ತಲ, ಮಂಜುನಾಥ ಕರ್ನೂಲ, ಸುರೇಶ ಗುತ್ತಲ, ಇನ್ನಿತರರು ಪಾಲ್ಗೊಂಡಿದ್ದರು.