ರೈತರಿಗೆ ಕಾಂಗ್ರೆಸ್ ತಪ್ಪು ಸಂದೇಶ: ಸಜ್ಜನರ
ಬ್ಯಾಡಗಿ: ರೈತರನ್ನು ದೇವರಿಗೆ ಹೋಲಿಸಿ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ದೇಶದ ಮೊದಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಆದರೆ, ಹಾವೇರಿ ಗೋಲಿಬಾರ್ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ರೈತರಿಗೆ ತಪ್ಪು ಸಂದೇಶ ರವಾನಿಸಿದೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಆರೋಪಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಆಣೂರು ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಸಾಲ ಮನ್ನಾ ಮಾಡಿದ್ದಾಗಿ ಬಡಾಯಿ ಕೊಚ್ಚುತ್ತಿರುವ ಕಾಂಗ್ರೆಸ್ ಮನ್ನಾ ಮಾಡಿದ ಹಣ ಎಷ್ಟು ಎಂಬುದನ್ನು ಬಹಿರಂಗಪಡಿಸಲಿ. ಶೇ. 40ರಷ್ಟು ರೈತರೂ ಸಾಲಮನ್ನಾ ವ್ಯಾಪ್ತಿಯಲ್ಲಿಲ್ಲ. ಹೀಗಾಗಿ, ಯೋಜನೆ ವಿಫಲವಾಗಿದೆ. ರೈತನ ಅಭಿವೃದ್ಧಿಗೆ ಮಹತ್ವದ ಕಾರ್ಯಕ್ರಮಗಳನ್ನು ನೀಡದ ಕಾಂಗ್ರೆಸ್ ರೈತರ ಕೃಷಿ ಉಪಕರಣಗಳಿಗೆ ನೀಡಬೇಕಾಗಿದ್ದ ಸಹಾಯಧನ ನೀಡದೆ ಮೋಸ ಮಾಡಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿದರು. ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ನಗರ ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ನಾಗರಾಜ ಬಳ್ಳಾರಿ, ಬುಡ್ಡನಗೌಡ್ರ, ಶಿವನಗೌಡ ಬಸನಗೌಡ್ರ, ಮುಖಂಡರಾದ ಭೀಮಪ್ಪ ಮಲ್ಲಾಡದ, ಗೋವಿಂದಪ್ಪ ಮೇಗಳಮನಿ, ಈಶ್ವರ ನೆಶ್ವಿ ಉಪಸ್ಥಿತರಿದ್ದರು.