ಇಂದು ಮೋಹನಕುಮಾರ ನಾಮಪತ್ರ ಸಲ್ಲಿಕೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬಿ.ಕೆ. ಮೋಹನಕುಮಾರ ಏ. 17ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಸ್ಥಳೀಯ ಶ್ರೀ ಕುಮಾರೇಶ್ವರ ಮಠದಿಂದ ಮೆರವಣಿಗೆಯಲ್ಲಿ ತೆರಳಿ ಮೋಹನಕುಮಾರ ನಾಮಪತ್ರ ಸಲ್ಲಿಸಲಿದ್ದು, ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜೆಡಿಎಸ್ ಮುಖಂಡ ಎಸ್.ಎಲ್. ಬಣಕಾರ ಮನವಿ ಮಾಡಿದ್ದಾರೆ.
ಇಂದು ಹಾದಿಮನಿ ನಾಮಪತ್ರ ಸಲ್ಲಿಕೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಿಪಂ ಸದಸ್ಯ ಬಸವರಾಜ ಹಾದಿಮನಿ ಏ. 17ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಬುಧವಾರ ಬೆಳಗ್ಗೆ 11ಗಂಟೆಗೆ ಸ್ಥಳೀಯ ಶ್ರೀ ಕುಮಾರೇಶ್ವರ ಮಠದಿಂದ ಮೆರವಣಿಗೆಯಲ್ಲಿ ತೆರಳಿ ಹಾದಿಮನಿ ನಾಮಪತ್ರ ಸಲ್ಲಿಸಲಿದ್ದು, ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಭೋಜರಾಜ ಕರೂದಿ ಮನವಿ ಮಾಡಿದ್ದಾರೆ.
ಐವರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಐವರು ಪಕ್ಷೇತರ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಹೀರೂರು ಗ್ರಾಮದ ಅಬ್ದುಲ್ ವಹಾಬ ಅಲ್ಲಾಭಕ್ಷ ಭಂಡಾರಿ, ಅಕ್ಕಿಅಲೂರ ಗ್ರಾಮದ ಖ್ವಾಜಾಮೊಹಿದ್ದೀನ ಇಮಾಮ ಹುಸೇನ ಅಣ್ಣೀಗೇರಿ, ಹಾನಗಲ್ಲಿನ ಚನಬಸನಗೌಡ ಶಿವಪುತ್ರಗೌಡ ಪಾಟೀಲ, ನಾರಾಯಣ ಭೀಮರಾವ್ ರಾಯ್ಕರ್, ರಾಮಪ್ಪ ಹನುಮಂತಪ್ಪ ಯಳ್ಳೂರ ಇಂದು ನಾಮಪತ್ರ ಸಲ್ಲಿಸಿದವರಾಗಿದ್ದಾರೆ.
ಬಿಎಸ್ಸಾರ್ ಹಂಚುತ್ತಿದ್ದ 'ಚಿತ್ರಾನ್ನ' ವಶ
ಹಿರೇಕೆರೂರು: ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ತೆರಳಿದ್ದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ಅಶೋಕ, ಮೆರವಣಿಗೆ ಬಳಿಕ ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಮತದಾರರಿಗೆ ಆಮಿಷವೊಡ್ಡುವ ಉದ್ದೇಶದಿಂದ ಚಿತ್ರಾನ್ನದ ಪ್ಯಾಕೆಟ್ಗಳನ್ನು ವಿತರಿಸುವ ವ್ಯವಸ್ಥೆ ಮಾಡಿದ್ದರು. ಚಿತ್ರಾನ್ನ ವಿತರಿಸುವಾಗ ತಾಲೂಕಿನ ನೀತಿ ಸಂಹಿತೆ ಪಾಲನೆ ಅಧಿಕಾರಿಗಳು ದಾಳಿ ನಡೆಸಿ, ಚಿತ್ರಾನ್ನದ ಪ್ಯಾಕೆಟ್ಗಳಿದ್ದ ಎರಡು ವಾಹನಗಳನ್ನು ಹಾಗೂ ಊಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ತಾಲೂಕು ನೀತಿ ಸಂಹಿತೆ ಅಧಿಕಾರಿ ಪಿ. ರಾಮಪ್ಪ ತಿಳಿಸಿದ್ದಾರೆ.