ಬಿಎಸ್‌ವೈ ಅಭಿವೃದ್ಧಿ ಕಾರ್ಯ: ಕೆಜೆಪಿ ಗೆಲವು
ಹಾನಗಲ್ಲ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳು ಕರ್ನಾಟಕ ಜನತಾ ಪಕ್ಷದ ಗೆಲವಿಗೆ ಸಹಕಾರಿಯಾಗಲಿವೆ ಎಂದು ಮಾಜಿ ಸಚಿವ, ಹಾನಗಲ್ಲ ವಿಧಾನಸಭಾ ಕೆಜೆಪಿ ಅಭ್ಯರ್ಥಿ ಸಿ.ಎಂ. ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ಲ ನಗರದಲ್ಲಿ ಚುನಾವಣಾ ಪ್ರಚಾರ ಕೈಕೊಂಡು ಮಾತನಾಡಿದ ಅವರು, ಯಡಿಯೂರಪ್ಪನವರು ಕೇವಲ ಒಂದು ಜಾತಿಗೆ ಸೀಮಿತವಾಗಿರದೇ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕೊಟ್ಯಂತರ ರುಪಾಯಿ ಅನುದಾನ ನೀಡಿದ್ದಾರೆ ಎಂದರು.
ಮಠಮಾನ್ಯಗಳ, ಮುಸ್ಲಿಂ ಸಮುದಾಯದ ಪ್ರಾರ್ಥನಾ ಮಂದಿರ, ಎಲ್ಲ ವರ್ಗಗಳ ಜನತೆಗೆ ಸಮುದಾಯಭವನ ನಿರ್ಮಾಣಕ್ಕೆ ಬಿ.ಎಸ್. ಯಡಿಯೂರಪ್ಪ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವುದು ಎಲ್ಲ ಪಕ್ಷಗಳವರೂ ಕರ್ನಾಟಕ ಜನತಾ ಪಕ್ಷದತ್ತ ವಲಸೆ ಬರುವಂತೆ ಮಾಡಿದೆ ಎಂದರು.
ಸೇರ್ಪಡೆ: ಈ ಸಂದರ್ಭದಲ್ಲಿ ಹಸನಮಿಯ್ಯಾ ಮಂಚಗಿ, ನನ್ನೆಸಾಬ ಮೋದುಲಾಲನವರ, ಬಾಷಾಸಾಬ ಮಂಚಗಿ, ರೂಪಸಾಬ ಅಣ್ಣಿಗೇರಿ, ನನ್ನೆಬಾ ಚಿಕ್ಕೇರಿ, ಬಸೀರ ಬಾಳೂರ, ಬಾಷಾಸಾಬ ನೆಗಳೂರ, ಬಾಬಾಜಾನ ಕೂಸನೂರ, ನಿಂಗಪ್ಪ ಕಾಶಂಬಿ ಸೇರಿದಂತೆ ಮುಖಂಡರು, ಅನೇಕ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಸಿ.ಎಂ. ಉದಾಸಿ ನೇತೃತ್ವದಲ್ಲಿ ಕೆಜೆಪಿಗೆ ಸೇರ್ಪಡೆಗೊಂಡರು.
ಮಂಜುನಾಥ ನಾಗಜ್ಜನವರ, ಗಣೇಶ ಮೂಡ್ಲಿಯವರ, ದಯಾನಂದ ನಾಗಜ್ಜನವರ, ಬಾಬಾಜಾನ ಕೊಂಡವಾಡಿ, ದೇವೆಂದ್ರಪ್ಪ ಮೂಡ್ಲಿಯವರ, ನಾಗೇಂದ್ರ ಬೇವಿನಮರದ, ನಾಗರಾಜ ತುಮರಿಕೊಪ್ಪ ಇದ್ದರು.