ಬೆಂಕಿ: ರು. 2 ಲಕ್ಷ ಹಾನಿ
ಹಿರೇಕೆರೂರು: ತಾಲೂಕಿನ ಹೊಲಬಿಕೊಂಡ ಗ್ರಾಮದ ಹೊರ ವಲಯದ ಜಮೀನಿನಲ್ಲಿದ್ದ ದನದ ಕೊಟ್ಟಿಗೆ ಮಂಗಳವಾರ ಸಂಜೆ 7.30 ವೇಳೆಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಗ್ರಾಮದ ರೈತ ನಾಗಪ್ಪ ನಿಂಗಪ್ಪ ಪೂಜಾರ ಎಂಬುವವರಿಗೆ ಸೇರಿದ ದನದ ಕೊಟ್ಟಿಗೆಯಲ್ಲಿದ್ದ ಒಂದು ಎತ್ತು, ಆಕಳು ಬೆಂಕಿಗೆ ಸಂಪೂರ್ಣ ಸುಟ್ಟು ಸಾವನ್ನಪ್ಪಿದೆ. ಇನ್ನೊಂದು ಎತ್ತು ತೀವ್ರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯ ಹೋರಾಡುತ್ತಿದೆ. ಅಲ್ಲದೇ ಸ್ಥಳದಲ್ಲಿದ್ದ ಚಕ್ಕಡಿ ಗಾಡಿ, ಮೇವಿನ ಬಣವಿ, 50 ಸ್ಪಿಂಕ್ಲರ್ ಪೈಪ್, ಹೆಚ್ಚಿನ ಬೆಲೆ ಬಾಳುವ ಅಪಾರ ಪ್ರಮಾಣದ ಕಟ್ಟಿಗೆ ನಾಟ ಸೇರಿದಂತೆ ವಿವಿಧ ವ್ಯವಸಾಯದ ಉಪಕರಣಗಳು ಸುಟ್ಟು ಕರಕಲಾಗಿವೆ.
ಸುಮಾರು ರು. 2ಲಕ್ಷಕ್ಕೂ ಅಧಿಕ ಆಸ್ತಿ ನಷ್ಟವಾಗಿದೆ ಎಂದು ಸ್ಥಳದಲ್ಲಿದ್ದ ಗ್ರಾಮ ಲೆಕ್ಕಿಗ ಕೆ.ಸಿ. ಎತ್ತಿನಮನಿ ತಿಳಿಸಿದರು. ವಿಷಯ ತಿಳಿಯುತ್ತಿದ್ದಂತೆ ಪಟ್ಟಣದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸಪಟ್ಟರು.