ಅಭಿವೃದ್ಧಿಗಾಗಿ ಪ್ರಾದೇಶಿಕ ಪಕ್ಷ ಬೆಂಬಲಿಸಿ
ಹಿರೇಕೆರೂರು: ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಶಾಸಕ ಯು.ಬಿ. ಬಣಕಾರ ಪರವಾಗಿ ಅವರ ಪತ್ನಿ ಅನ್ನಪೂರ್ಣಾ ಉಜಣೇಶ್ವರ ಬಣಕಾರ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಪಾದಯತ್ರೆ ಮೂಲಕ ಮತದಾರರ ಮನೆಗಳಿಗೆ ತೆರಳಿ ಬೀರುಸಿನ ಮತಯಾಚನೆ ನಡೆಸಿದರು.
ಕೆಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ಮತದಾರರ ಮನೆ ಮನೆಗೆ ತೆರಳಿ, ಕೆಜೆಪಿ ಬೆಂಬಲಿಸಿ ಪಕ್ಷದ ತೆಂಗಿನಕಾಯಿ ಚಿನ್ನೆಗೆ ಮತ ಚಲಾಯಿಸುವಂತೆ ಮನವಿ ಮಾಡಿದರು. ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಪ್ರಾದೇಶಿಕ ಪಕ್ಷ ಬೆಂಬಲಿಸುವ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸುವಂತೆ ಕೋರಿದರು.
ಈ ಸಂದರ್ಭ ಅನ್ನಪೂರ್ಣ ಯು. ಬಣಕಾರ ಮಾತನಾಡಿ, ಕಲ್ಯಾಣ ರಾಜ್ಯ ನಿರ್ಮಾಣ ಮಾಡುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದ್ದಾರೆ. ಪ್ರಸ್ತುತ ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಪ್ರಾದೇಶಿಕ ಅವಶ್ಯಕತೆ ಇದ್ದು, ನೆರೆ ರಾಜ್ಯಗಳ ಪ್ರಾದೇಶಿಕ ಪಕ್ಷದ ಮುಖಂಡರು ಕೇಂದ್ರ ಸರ್ಕಾರದಿಂದ ಹಲಾವರು ಕೋಟಿ ಅನುದಾನ ಪಡೆಯುತ್ತಿವೆ ಎಂದು ಹೇಳುವ ಮೂಲಕ ಮತದಾರರಿಗೆ ಪ್ರಾದೇಶಿಕ ಪಕ್ಷದ ಮಹತ್ವದ ಬಗ್ಗೆ ತಿಳಿಸಿದರು.
ಮಹಿಳೆಯರು ವಿರೋಧಿಗಳ ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕ, ಸರಳ ಸಜ್ಜನಿಕೆಗೆ ಹೆಸರಾದ ಯು.ಬಿ. ಬಣಕಾರ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಆಶೀರ್ವದಿಸಿ ತಾಲೂಕಿನ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ಪಪಂ ಸದಸ್ಯರಾದ ಗೀತಾ ನಿಂಗಪ್ಪ ದಂಡ್ಗೀಹಳ್ಳಿ, ಮಮತಾ ಪ್ರಭು ಮಳವಳ್ಳಿ, ರತ್ನ ನಾಗರಾಜ ತಿಪ್ಪಣ್ಣನವರ, ರವಿ ಪುಟ್ಟಪ್ಪಗೌಡ್ರ, ಶಿವಪುತ್ರಪ್ಪ ಶಿರಿಗೌಡರ, ರೂಪಾ ದಂಡ್ಗೀಹಳ್ಳಿ, ಇಂದ್ರಾ ನಾಯ್ಕರ, ಹಮೀದಾ ಮುಲ್ಲಾ, ಶರ್ಮಿಳಾ ದಾರೋಗಾರ, ಜಬೀನಾ ಮಲ್ಲಾಡದ, ರೇಣು ಮಾರೇರ, ಶಮೀಲಾ ಚೌಡಿ, ಗೌರಮ್ಮ ಹಿರೇಮಠ, ರಾಜು ಕಾರಗಿ, ಕುಮಾರ ಬಾಗಲಕೋಟಿ, ಶಿವು ಗೊಡಚಿಕೊಂಡ, ತಿಲಕ್ ಚಕ್ರಸಾಲಿ ಹಾಜರಿದ್ದರು.