ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿ ಅಭಿವೃದ್ಧಿಯೇ ಗೆಲವಿಗೆ ಶ್ರೀರಕ್ಷೆ

Lingaraj Badiger
Updated On : 18 Apr 2013, 11:51 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ.17
ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಮತದಾರ ಪಾಠ ಕಲಿಸುತ್ತಾನೆ. ಕಾಂಗ್ರೆಸ್ ನಮ್ಮ ಎದುರಾಳಿ, ಬಿಜೆಪಿ ರಾಜ್ಯದಲ್ಲಿ ಮಾಡಿದ ಅಭಿವೃದ್ದಿಯೇ ಗೆಲವಿಗೆ ಶ್ರೀರಕ್ಷೆ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬಿಜೆಪಿ ರಾಜ್ಯ ಕಾರ್ಯದರ್ಶಿ ಭೋಜರಾಜ ಕರೂದಿ ತಿಳಿಸಿದರು.
ಬುಧವಾರ ಹಾನಗಲ್ಲಿನಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹಾದಿಮನಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಮತದಾರರ ಅಂತರಂಗದ ಪಕ್ಷ. ಕಳೆದ ಅವಧಿಯಲ್ಲಿ ಬಿಜೆಪಿ ಇಡೀ ರಾಜ್ಯದ ಹಿತದ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಭಾರೀ ಪ್ರಮಾಣದ ಅಭಿವೃದ್ಧಿ ಕಾಣಿಸಿಕೊಂಡಿದ್ದು, ಬಿಜೆಪಿ ಆಡಳಿತದ ಇಚ್ಚಾಶಕ್ತಿ ಕಾರಣದಿಂದ ಆಗಿದೆ. ಸ್ವಯಂಪ್ರೇರಣೆಯಿಂದ ಕಾರ್ಯಕರ್ತರು ಬಿಜೆಪಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ರಾಜನಾಥ ಸಿಂಗ್ ಹಾನಗಲ್ಲಿಗೆ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಕೇಂದ್ರ ನಾಯಕರಾದ ರಾಜನಾಥ ಸಿಂಗ್,   ಅನಂತಕುಮಾರ, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಇನ್ನಿತರ ಹಿರಿಯ ನಾಯಕರು ಆಗಮಿಸಲಿದ್ದಾರೆ.
ಮತದಾರ ಜಾಗೃತ: ಹಾನಗಲ್ಲ ತಾಲೂಕಿನ ಜಾಗೃತ ಮತದಾರ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ್ದಾನೆ. ಸಚಿವರಾಗಿದ್ದ ಉದಾಸಿ ಸರಕಾರದ ಅಭಿವೃದ್ಧಿ ಅನುದಾನಗಳನ್ನೂ ಸರಿಯಾಗಿ ಬಳಸಿಕೊಳ್ಳಲಿಲ್ಲ. ಇನ್ನೂ ಅತ್ಯುತ್ತಮ ಅಭಿವೃದ್ಧಿ ಸಾಧ್ಯವಾಗುತ್ತಿತ್ತು. ಆದರೆ, ಎಲ್ಲ ನಾನೇ ಮಾಡಿರುವೆ ಎನ್ನುವ ಕೆಜೆಪಿ ಅಭ್ಯರ್ಥಿ ಉದಾಸಿ ಅವರು ಇದು ಬಿಜೆಪಿ ಪಕ್ಷದ ಅಭಿವೃದ್ಧಿ ಎಂಬುದನ್ನು ಅರಿಯದೇ ಹೋದುದು ದುರಂತ ಎಂದು ಕರೂದಿ ಕಿಡಿ ಕಾರಿದರು.
ಕಾಂಗ್ರೆಸ್ ಎದುರಾಳಿ: ಬಿಜೆಪಿಗೆ ಕಾಂಗ್ರೆಸ್ ಅಭ್ಯರ್ಥಿ ಎದುರಾಳಿ, ಉಳಿದ ಪಕ್ಷಗಳು ಲೆಕ್ಕಕ್ಕಿಲ್ಲ. ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಇಲ್ಲಿ ಏನೂ ನಡೆಯದು. ರಾಷ್ಟ್ರೀಯ ಪಕ್ಷಗಳ ನಡುವೆ ಹಣಾ-ಹಣಿ ನಡೆಯಲಿದ್ದು ಬಿಜೆಪಿಗೆ ಇಲ್ಲಿ ಗೆಲುವು ಖಚಿತ ಎಂದರು.
ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹಾದಿಮನಿ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ನೀರಾವರಿಗೆ ಅದ್ಯತೆ ನೀಡದೇ ಈ ಹಿಂದೆ ಆಡಳಿತ ನಡೆಸಿದವರು ಕ್ಷೇತ್ರದ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಧರ್ಮಾ ಜಲಾಶಯ ಅಭಿವೃದ್ಧಿಗೊಳಿಸಿದರೆ ಹಾನಗಲ್ಲ ತಾಲೂಕಿನ ಇನ್ನೂ 25 ಸಾವಿರ ಎಕರೆ ಕೃಷಿಭೂಮಿಗೆ ನೀರಾವರಿ ಒದಗಿಸಲು ಸಾಧ್ಯ. ತಾಲೂಕಿನ 750 ನೀರಾವರಿ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ. ಈಗ ರೈತರ ಜಮೀನುಗಳ ರಸ್ತೆಗಳ ಅಭಿವೃದ್ಧಿ ಅಗತ್ಯವಿದೆ ಎಂದರು.
ಹಾನಗಲ್ಲ ತಾಲೂಕಿನ 25 ಸಾವಿರ ಬಡ ಗುಡಿಸಲು ವಾಸಿಗಳಿಗೆ ಸೂರು ನೀಡುವ ಅಗತ್ಯವಿದೆ. ಬೆಳೆ ವಿಮೆ ವಿಷಯದಲ್ಲಿ ಗ್ರಾಮ ಮಟ್ಟದ ಆಣೆವಾರಿಗೆ ಅದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ  ಹಾಗೂ ಸಂಸದ ಶಿವಕುಮಾರ ಉದಾಸಿ ಒಂದಷ್ಟು ಗಮನ ನೀಡದೇ ಹೋದುದರಿಂದ ರೈತರಿಗೆ ಬೆಳೆವಿಮೆ ವಿಷಯದಲ್ಲಿ ನ್ಯಾಯ ಸಿಗುತ್ತಿಲ್ಲ. ನಾನು ಬಜೆಪಿ ಅಭ್ಯರ್ಥಿಯಾಗಿ ಕಾರ್ಯನಿರ್ವಹಿಸುತ್ತೇನೆ ಹೊರತು ನಾನೇ ಎಲ್ಲ ಎಂಬ ಅಹಂಕಾರ ನನ್ನದಲ್ಲ. ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಾದ ರವಿಕುಮಾರ ಬೆಲ್ಲದ, ತಾಲೂಕು ಅಧ್ಯಕ್ಷ ಜಿ.ಬಿ. ಗುಡ್ಡಪ್ಪನವರ, ತಾಲೂಕು ಕಾರ್ಯಕದರ್ಶಿ ಅನಂತವಿಕಾಸ ನಿಂಗೋಜಿ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಕುಲಕರ್ಣಿ, ಉಪಾಧ್ಯಕ್ಷ ಎಂ.ಎಂ. ಕಂಬಳಿ, ಸತೀಶ ಕುರುಬರ, ಎಸ್.ಆರ್. ಪಾಟೀಲ, ಪಿ.ಆರ್. ನಿಂಬಣ್ಣನವರ, ರಾಮಣ್ಣ ದೊಡ್ಡಮನಿ ಸುದ್ದಿಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement