ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ: ಶಿವಣ್ಣವರ
ಬ್ಯಾಡಗಿ: ರೈತರ ಸಮಾಧಿ ಮೇಲೆ ಸರ್ಕಾರ ರಚಿಸಿದ್ದ ಬಿಜೆಪಿಯ ದುರಾಡಳಿತದಿಂದ ರಾಜ್ಯದ ಜನತೆಗೆ ಭ್ರಮ ನಿರಸನವಾಗಿದೆ. ಆರು ದಶಕಗಳಿಂದ ದೇಶದಲ್ಲಿ ಉತ್ತಮ ಹಾಗೂ ಸುಭದ್ರ ಸರ್ಕಾರಗಳನ್ನು ನೀಡಿದ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬ್ಯಾಡಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಡಗಿ ಮತಕ್ಷೇತ್ರದ ಅಸುಂಡಿ, ಹೂಲಿಹಳ್ಳಿ, ಜೋಯಿಸರ ಹರಳಳ್ಳಿ ಮುಂತಾದ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಮತದಾರ ನೀಡಿದ್ದ ಅವಕಾಶವನ್ನು ಆ ಪಕ್ಷದ ಮುಖಂಡರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಿಲ್ಲ. ಐದು ವರ್ಷಗಳಿಂದ ರಾಜ್ಯದಲ್ಲಿ ಅರಾಜಕತೆ ಮೂಡಿತ್ತು. ಬಿಜೆಪಿ ಶಾಸಕರೇ ಸರ್ಕಾರವನ್ನು ಬೀಳಿಸಲು ನಾಲ್ಕು ಬಾರಿ ಯತ್ನಿಸಿದರು ಎಂದು ದೂರಿದರು. ಬಿಜೆಪಿಯ ಒಳಜಗಳ, ಕಿತ್ತಾಟವನ್ನು ನೋಡಿ ಜನರು ರೋಸಿ ಹೋಗಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕ್ಷೇತ್ರದಲ್ಲೂ ಕಾಂಗ್ರೆಸ್ ಅಲೆ ಇದ್ದು, ಗೆಲುವು ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಮುಖಂಡರಾದ ಎಸ್.ಆರ್. ಪಾಟೀಲ, ಎಸ್.ಸಿ. ಶಿಡೇನೂರ, ದಾನಪ್ಪ ಚೂರಿ, ಲಿಂಗಪ್ಪ ಕೊಂಬಳಿ, ಎಸ್.ಎಸ್. ಬೆಲ್ಲದ, ಹುಸೇನಸಾಬ್ ದೊಡ್ಮನಿ, ಸುರೇಶಗೌಡ ಪಾಟೀಲ, ರಮೇಶ ಸುತ್ತಕೋಟಿ, ಮಂಜುನಾಥ ಭೋವಿ, ಬಸವರಾಜ ಬಳ್ಳಾರಿ, ಹನುಮಂತಪ್ಪ ಬೆಳವಿಗಿ, ಕರಿಯಪ್ಪ ಮೂಲಿಮನಿ ಉಪಸ್ಥಿತರಿದ್ದರು.